ರಾಜಕೀಯ

BREAKING NEWS! ನಾಳೆಯೇ ವಿಶ್ವಾಸಮತ ಸಾಬೀತಿಗೆ ಪಟ್ಟು, ಇಬ್ಬರು ಪಕ್ಷೇತರ ಶಾಸಕರಿಂದ ಸುಪ್ರೀಂಗೆ ಅರ್ಜಿ

Raghavendra Adiga
ನವದೆಹಲಿ: ಕರ್ನಾಟಕ ರಾಜ್ಯ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ರಾಜ್ಯದ ಇಬ್ಬರು ಸ್ವತಂತ್ರ (ಪಕ್ಷೇತರ) ಶಾಸಕರು ತಾವೂ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. 
ಸೋಮವಾರ ಸಂಜೆ ಐದರ ಒಳಗಾಗಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕೋರ್ಟ್ ಆದೇಶಿಸಬೇಕೆಂದು ಕೋರಿ ಪಕ್ಷೇತರ ಶಾಸಕರಾದ ಎಚ್. ನಾಗೇಶ್ ಹಾಗೂ ಆರ್. ಶಂಕರ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಪಕ್ಷೇತರರು ಅಡ್ವೋಕೇಟ್ ದೀಕ್ಷಾ ರೈ ಎನ್ನುವವರ ಮೂಲಕ ಸುಪ್ರೀಂಗೆ ಮನವಿ ಸಲ್ಲಿಸಿದ್ದು ರಾಜ್ಯದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟಿಗೆ ಅಂತ್ಯ ಹಾಡಬೇಕೆಂಬ ಉದ್ದೇಶದಿಂದ ಈ ಅರ್ಜಿ ಸಲ್ಲಿಕೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಸೋಮವಾರ ಸಂಜೆಯೊಳಗೆ ಬಹುಮತವಿಲ್ಲದ ಎಚ್.ಡಿ.. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಾವು ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು. ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಅವರು ಕೇಳಿದ್ದಾರೆ. 

ಸೋಮವಾರ ಸಂಜೆ ಐದು ಗಂಟೆಯೊಳಗಾಗಿ ಸ್ಪೀಕರ್ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಲು ಅರ್ಜಿದಾರರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದ ಇಬ್ಬರು ಪಕ್ಷೇತರಶಾಸಕರಾದ ನಾಗೇಶ್ ಹಾಗೂ ಶಂಕರ್ ಅವರುಗಳು ಅತೃಪ್ತರ ರಾಜೀನಾಮೆ ಪರ್ವ ಪ್ರಾರಂಭವಾಗುತ್ತಲೇ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದಿದ್ದರು.
SCROLL FOR NEXT