ರಾಜಕೀಯ

ಅತೃಪ್ತ ಶಾಸಕರು ನಮಗೆ ಮಾಡಿದ್ದನ್ನೇ ಮುಂದೆ ನಿಮಗೂ ಮಾಡುತ್ತಾರೆ: ಬಿಜೆಪಿಗೆ ಡಿಕೆಶಿ ಎಚ್ಚರಿಕೆ

Lingaraj Badiger
ಬೆಂಗಳೂರು: ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ಮಂಗಳವಾರ ನಿರ್ಣಾಯಕ ಘಟ್ಟ ತಲುಪಿದ್ದು, ಮುಂಬೈನಲ್ಲಿರುವ ಅತೃಪ್ತ ಶಾಸಕರು ಈಗ ನಮಗೆ ಮಾಡಿದ್ದನ್ನೇ ಮುಂದೆ ನಿಮಗೂ ಮಾಡುತ್ತಾರೆ ಎಂದು ಸಚಿವ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.
ಇಂದು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನನ್ನನ್ನು ಜೈಲಿಗೆ ತಳ್ಳಲು ಸಂಚು ನಡೆಯುತ್ತಿದೆ. ತಪ್ಪು ಮಾಡಿದ್ದರೆ ನಾನು ಜೈಲಿಗೆ ಹೋಗಲು ಸಿದ್ಧ. ನನ್ನ ತಾಯಿಯನ್ನೂ ಬೇನಾಮಿ ಆಸ್ತಿ ಹೊಂದಿದವರೆಂದು ಬಿಂಬಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ರಚನೆಗೆ ಡಿಕೆಶಿ ಬೆಂಬಲ ಎಂದು ಬಿಂಬಿಸ್ತೀರಲ್ಲಾ? ಇದು ಸರಿನಾ? ಎಂದು ಪ್ರಶ್ನಿಸಿದ ಡಿಕೆಶಿ, 30-40 ವರ್ಷ ರಾಜಕಾರಣ ಮಾಡಿದ್ದೇನೆ. ಕುಮಾರಸ್ವಾಮಿ ವಿರುದ್ಧವೂ ಹೋರಾಡಿದ್ದೇನೆ; ದೇವೇಗೌಡರ ಜತೆಗೂ ಫೈಟ್ ಮಾಡಿದ್ದೇನೆ. ಈಗ ನಿರ್ಣಾಯಕ ಕ್ಷಣ ಬಂದಿದೆ ಎಂದರು.
ಇದೇ ವೇಳೆ ಮುಂಬೈ ಭೇಟಿಯ ಬಗ್ಗೆ ಮಾತನಾಡಿದ ಡಿಕೆಶಿ, ನಾನು ಡಕಾಯಿತನಾ? ಒಬ್ಬ ಸಚಿವ. ಸಚಿವರನ್ನು ಮುಂಬೈ ಪೊಲೀಸರು ಹೇಗೆ ನಡೆಸಿಕೊಂಡರು?. ನನಗೆ ಹೋಟೆಲ್​ಗೆ ಪ್ರವೇಶ ಕೊಟ್ಟಿಲ್ಲ. ಎಂಟಿಬಿ ನಾಗರಾಜ್ ಅವರನ್ನು ಕೂಡಿಹಾಕಿದ್ದೆನಾ? ನನ್ನ ಮನೆಗೆ ಬಂದಾಗ ಕೂಡಿಹಾಕಬಹುದಿತ್ತಿಲ್ಲ? ಎಂದರು.
ಮುಂಬೈನಲ್ಲಿರುವ ಶಾಸಕರು ಯಾರೂ ಅತೃಪ್ತರಲ್ಲ. ಅವರೆಲ್ಲರೂ ಸಂತೃಪ್ತರು. ಆದರೆ ಅವರ ರಾಜಕೀಯ ಭವಿಷ್ಯ ಇಲ್ಲಿಗೆ ಮುಕ್ತಾಯವಾಗುತ್ತಿದೆ ಎಂಬುದು ಬೇಸರವಾಗುತ್ತಿದೆ. ಶಾಸಕರನ್ನು ಅನರ್ಹಗೊಳಿಸುವ ಹಕ್ಕಿದೆ. ಈ ವಿಚಾರವನ್ನು ಶಾಸಕರಿಗೂ ಹೇಳಿದ್ದೇನೆ. ಆದರೆ ಕೇಳುತ್ತಿಲ್ಲ. ಬಿಜೆಪಿಯವರ ಮಾತು ಕೇಳಿ ತಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.
ಇದಕ್ಕೆ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಆಕ್ಷೇಪ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ವಿಚಾರಣೆ ನಡೆಯುತ್ತಿದೆ. ಅನಗತ್ಯ ಶಾಸಕರನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಶಿವಕುಮಾರ್ ಹೇಳಿರುವ ವಿಚಾರ ಸರಿಯಾಗಿದೆ. ತಪ್ಪಿಲ್ಲ ಎಂದು ವಿವರಿಸಿದರು.
SCROLL FOR NEXT