ರಾಜಕೀಯ

ದೋಸ್ತಿಯಲ್ಲ ದುಷ್ಮನ್ ಸರ್ಕಾರವಾಗಿತ್ತು: ಕೆ ಎಸ್ ಈಶ್ವರಪ್ಪ ಕಿಡಿ

Srinivasamurthy VN
ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸರ್ಕಾರ ದೋಸ್ತಿ ಸರ್ಕಾರವಾಗಿರದೆ ದುಷ್ಮನ್​​ ಸರ್ಕಾರವಾಗಿತ್ತು ಎಂದು ಬಿಜೆಪಿ ನಾಯಕ ಹಾಗೂ ಶಾಸಕ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸರ್ಕಾರ ದೋಸ್ತಿ ಸರ್ಕಾರವಾಗಿರದೆ ದುಷ್ಮನ್​​ ಸರ್ಕಾರವಾಗಿತ್ತು. ಅವರ ದೋಸ್ತಿ ಏನಾಗಿತ್ತು ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ದೋಸ್ತಿ ಸರ್ಕಾರದಲ್ಲಿ ಎಲ್ಲರೂ ಸ್ವಯಂ ಘೋಷಿತ ಲೀಡರ್ ಗಳು. ಡಿಕೆ ಶಿವಕುಮಾರ್ ಮಾಧ್ಯಮ ಹಾಗೂ ಪ್ರತಿಕೆಗಳ ಮುಂದೆ ಟ್ರಬಲ್​​​ ಶೂಟರ್​​ ರೀತಿ ವರ್ತನೆ ಮಾಡಿದ್ದಾರೆ. ರಾಜ್ಯದ ಜನರು ಅವರನ್ನು ಟ್ರಬಲ್​​ ಶೂಟರ್​​ ಅಂತ ಕರೆಯಬೇಕು. ಆಗ ಮಾತ್ರ ಅವರು ನಾಯಕರಾಗುತ್ತಾರೆ ಎಂದು ಹೇಳಿದರು.
ಇದೇ ವೇಳೆ ತಿಂಗಳಾಂತ್ಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲಿದ್ದು, ರೈತರ ಸಾಲವನ್ನು ಮನ್ನಾ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಬಿ ಎಸ್​​​ ಯಡಿಯೂರಪ್ಪ ಮಾತಿಗೆ ತಪ್ಪದ ನಾಯಕರಾಗಿದ್ದು, ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವತ್ತ ನಮ್ಮ ಗಮನವಿರಲಿದೆ. ನಮ್ಮ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು. 
ಇದೇ ವೇಳೆ ಅತೃಪ್ತ ಶಾಸಕರ ಕುರಿತು ಮಾತನಾಡಿದ ಈಶ್ವರಪ್ಪ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಆದರೆ ನಾವು ಯಾರನ್ನೂ ಬಲವಂತ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ರಾಜ್ಯ ಅಭಿವೃದ್ಧಿ ಕಾಣಲಿದೆ. ರಾಜ್ಯದ ಜನತೆಗೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.
SCROLL FOR NEXT