ರಾಜಕೀಯ

ನೂತನ ಬಿಜೆಪಿ ಸರ್ಕಾರದಲ್ಲಿ ಜಗದೀಶ್ ಶೆಟ್ಟರ್ ಗೆ ಪ್ರಮುಖ ಸ್ಥಾನ?

Sumana Upadhyaya
ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪ್ರಮುಖ ಹುದ್ದೆ ಸಿಗುತ್ತದೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ.
ಬಿ ಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದ ಪ್ರಬಲ ಮುಖಂಡರು. ಜಗದೀಶ್ ಶೆಟ್ಚರ್ ತಮಗೆ ಪೈಪೋಟಿ ನಾಯಕ ಎಂಬುದು ಯಡಿಯೂರಪ್ಪನವರಿಗೆ ಸಹ ಗೊತ್ತಿದೆ. ಇದಕ್ಕಾಗಿಯೇ 2008ರಲ್ಲಿ ಬಿ ಎಸ್ ಯಡಿಯೂರಪ್ಪನವರು ತಮ್ಮ ಸಂಪುಟದಲ್ಲಿ ಜಗದೀಶ್ ಶೆಟ್ಟರ್ ಗೆ ಸಚಿವ ಸ್ಥಾನ ಸಿಗದಂತೆ ಮಾಡಿ ಸಕ್ರಿಯ ರಾಜಕಾರಣದಿಂದ ದೂರವಿರಿಸಲು ಸ್ಪೀಕರ್ ಸ್ಥಾನವನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ.
2009ರಲ್ಲಿ ಬಿಜೆಪಿ ಸರ್ಕಾರದಲ್ಲಿ ಶೆಟ್ಟರ್ ಅವರಿಗೆ ಅಂದಿನ ರಾಜಕೀಯ ಸನ್ನಿವೇಶದೊಳಗೆ ಸಚಿವ ಹುದ್ದೆ ನೀಡಲಾಯಿತು. ಬಳ್ಳಾರಿಯ ರೆಡ್ಡಿ ಬ್ರದರ್ಸ್ ಅವರ ನಾಯಕತ್ವಕ್ಕೆ ರೊಚ್ಚಿಗೆದ್ದ 50ಕ್ಕೂ ಹೆಚ್ಚು ಬಿಜೆಪಿ ಶಾಸಕರು ಹೈದರಾಬಾದ್ ನ ಹೊಟೇಲ್ ನಲ್ಲಿ ಠಿಕಾಣಿ ಹೂಡಿ ಸರ್ಕಾರಕ್ಕೆ ಬೆದರಿಕೆಯೊಡ್ಡಿದ್ದರು.ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಮೂರು ವರ್ಷ ಕಳೆದ ನಂತರ ಕೆಲ ತಿಂಗಳ ಮಟ್ಟಿಗಾದರೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು.
ತಮ್ಮ ನಾಯಕನಿಗೆ ನೂತನ ಸಚಿವ ಸಂಪುಟದಲ್ಲಿ ಪ್ರಮುಖ ಹುದ್ದೆ ನೀಡಿ ಎಂದು ಶೆಟ್ಟರ್ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದರೆ ಶೆಟ್ಟರ್ ಮಾತ್ರ ಸದ್ಯಕ್ಕೆ ಏನೂ ಹೇಳುತ್ತಿಲ್ಲ. ತಮ್ಮ ಆದ್ಯತೆ ಈಗ ವಿಶ್ವಾಸಮತ ಯಾಚನೆಯಲ್ಲಿ ಗೆದ್ದು ಸರ್ಕಾರ ರಚಿಸುವುದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
SCROLL FOR NEXT