ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅನಿಶ್ಚಿತತೆ ಇರುವ ಸಂದರ್ಭದಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಲೆಯ ನೀರಿನಲ್ಲಿ ಹಡಗು ನಡೆಸುವುದು ಎಷ್ಟು ಕಷ್ಟವೋ ಹಾಗೆಯೇ ಇಂತಹ ರಾಜಕೀಯ ಸನ್ನಿವೇಶಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಆದರೆ ಯಡಿಯೂರಪ್ಪನವರಿಗೆ ರಾಜಕೀಯದಲ್ಲಿ ಅನುಭವವಿದೆ, ಮೇಲಾಗಿ ಇಂತಹ ಸನ್ನಿವೇಶಗಳನ್ನು ಅವರು ಈ ಹಿಂದೆ ಎದುರಿಸಿದ್ದರು.
ಮುಂದಿನ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದು, ಈ ತಿಂಗಳ ಅಂತ್ಯದೊಳಗೆ ಹಣಕಾಸು ಮಸೂದೆಗೆ ಸದನದಲ್ಲಿ ಒಪ್ಪಿಗೆ ಪಡೆಯುವುದು, ಅತೃಪ್ತ ಶಾಸಕರನ್ನು ಮತ್ತು ನಿಷ್ಠಾವಂತರನ್ನು ಸರ್ಕಾರದಲ್ಲಿ ಒಟ್ಟು ಸೇರಿಸುವುದು, ಮುಂದಿನ ಆರು ತಿಂಗಳಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಈ ಎಲ್ಲಾ ಸವಾಲುಗಳು ಯಡಿಯೂರಪ್ಪನವರಿಗೆ ಸದ್ಯ ಇವೆ.
ಯಡಿಯೂರಪ್ಪನವರ ನಂತರದ ಬಹುದೊಡ್ಡ ಸವಾಲು ಸಚಿವ ಸಂಪುಟ ರಚನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಲು ಸಹಾಯ ಮಾಡಿದ ಅತೃಪ್ತ ಶಾಸಕರನ್ನು ಕೂಡ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಯಡಿಯೂರಪ್ಪನವರಿಗೆ ಇದೆ. ಅದರ ಜೊತೆಗೆ ತಮ್ಮ ಪಕ್ಷದ ಹಿರಿಯ ನಾಯಕರು ಸೇರಿದಂತೆ ಸಕ್ರಿಯ ಶಾಸಕರನ್ನು ಕೂಡ ತೃಪ್ತಿಪಡಿಸಬೇಕು. 34 ಸದಸ್ಯರುಗಳಿಗಿಂತ ಹೆಚ್ಚು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ.
ಸಚಿವ ಸಂಪುಟ ರಚನೆ ಬಳಿಕ ವಿಧಾನಸಭೆಯಲ್ಲಿ ಸದಸ್ಯರ ಬಲಾಬಲದ ಸಂಖ್ಯೆಯ 225 ಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ 113 ಸ್ಥಾನಗಳನ್ನು ಹೊಂದಬೇಕು. ಬಹುಮತ ಸಾಬೀತುಪಡಿಸಲು ಮುಂದಿನ ಆರು ತಿಂಗಳೊಳಗೆ ನಡೆಯುವ ಉಪ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಬಿಜೆಪಿ ಕನಿಷ್ಠ 7 ಸ್ಥಾನಗಳನ್ನಾದರೂ ಗೆಲ್ಲಬೇಕು. ಉಪ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಗೆಲ್ಲುವ ಹೆಚ್ಚಿನ ಅವಕಾಶ ಇದ್ದರೂ ಕೂಡ ಈಗಾಗಲೇ ಅಧಿಕಾರ ಕಳೆದುಕೊಂಡು ಗಾಯಗೊಂಡ ಸ್ಥಿತಿಯಲ್ಲಿರುವ ಕಾಂಗ್ರೆಸ್-ಜೆಡಿಎಸ್ ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
2008ರಲ್ಲಿ ಅಲ್ಪ ಬಹುಮತ ವೈಫಲ್ಯದಿಂದ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ನಂತರ ಸ್ವತಂತ್ರ ಶಾಸಕರ ಬೆಂಬಲದಿಂದ ಅವರನ್ನು ಸಚಿವರನ್ನಾಗಿ ಮಾಡಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಈಗಲೂ ಬಿಜೆಪಿಗೆ ಅದೇ ಪರಿಸ್ಥಿತಿ ಬಂದಿದೆ. ಅಂದು ಬಳ್ಳಾರಿ ಗಣಿ ಧನಿಗಳಾದ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಸೋದರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವಿಪರ್ಯಾಸವೆಂದರೆ ಯಡಿಯೂರಪ್ಪನವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ಪ್ರಮುಖ ವಿಷಯವಾಗಿ ರೆಡ್ಡಿ ಸೋದರರಿಂದಲೇ ನಂತರ ಸರ್ಕಾರ ಪತನವಾಯಿತು ಎಂದು ಹೇಳಲಾಗುತ್ತಿತ್ತು.
ಆದರೆ ಇಂದು ರೆಡ್ಡಿ ಸೋದರರು ಬಿಜೆಪಿ ಸರ್ಕಾರದಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಅವರ ಸಹಚರ ಬಿ ಶ್ರೀರಾಮುಲು ಮಾತ್ರ ಯಡಿಯೂರಪ್ಪನವರೊಂದಿಗಿದ್ದಾರೆ. ಬಿಜೆಪಿ ಹೈಕಮಾಂಡ್ ಕೇಂದ್ರದಲ್ಲಿ ಕಟ್ಟುನಿಟ್ಟಾಗಿದೆ. ಅದು ಪಕ್ಷಕ್ಕೆ ಸಾರ್ವಜನಿಕ ವಲಯದಲ್ಲಿ ಯಾವುದೇ ಧಕ್ಕೆಯುಂಟಾಗದಂತೆ ನಾಯಕರು ಪಕ್ಷ ವಿರೋಧಿ ನಡೆಸದಂತೆ ನೋಡಿಕೊಳ್ಳಬಹುದು. ಅದರಿಂದ ಯಡಿಯೂರಪ್ಪನವರಿಗೆ ವರದಾನವಾಗಬಹುದು.
2008ರಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಮತ್ತು ನಂತರ ವಿಧಾನಸಭೆಯಲ್ಲಿ ಪ್ರಮುಖ ನಾಯಕರಾಗಿ ಹೆಚ್ ಡಿ ಕುಮಾರಸ್ವಾಮಿ ಇದ್ದರು. ಆ ಸನ್ನಿವೇಶ 2019ರಲ್ಲಿ ಪುನರಾವರ್ತನೆಯಾಗುವಂತೆ ಕಾಣುತ್ತಿದೆ.
ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರ ಸದ್ಯದ ಹೇಳಿಕೆ ನೋಡಿದರೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಅಷ್ಟು ಬೇಗ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos