ಬೆಂಗಳೂರು: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಅಕ್ರಮ ಸಂಬಂಧ ಹೊಂದಿರುವ ದಂಪತಿಗೆ ಜನಿಸಿದ ದಿವ್ಯಾಂಗ ಮಗುವಿದ್ದಂತೆ ಹೆಚ್ಚು ದಿನ ಉಳಿಯಲಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಸರ್ಕಾರ ಪತನಕ್ಕೆ ಯಡಿಯೂರಪ್ಪ ಏನನ್ನೂ ಮಾಡುವುದಿಲ್ಲ, ತನ್ನಷ್ಟಕ್ಕೆ ತಾನೇ ಸರ್ಕಾರ ಪತನಗೊಳ್ಳಲಿದೆ. ಅಮಿತ್ ಶಾ ಮತ್ತಿತರ ಕೇಂದ್ರ ಬಿಜೆಪಿ ನಾಯಕರು ಕೂಡಾ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರವೇ ಪತನಗೊಳ್ಳಲಿದೆ. ನಾವು ಅದರ ಅಸ್ತಿತ್ವಕ್ಕೆ ಕೊನೆಗಾಣಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಹಾಗೂ ಗೋವಾ ನಡುವಿನ ಮಹದಾಯಿ ನದಿ ವಿವಾದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಆರೋಪಿಸಿದ ಅವರು, ಸುಪ್ರೀಂಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕುಡಿಯುವ ನೀರಿನ ಬಗ್ಗೆ ಹಿಂದಿನ ಸರ್ಕಾರ ಮುಂಜಾಗ್ರತೆ ವಹಿಸಲಿಲ್ಲ. ಈಗ ಈ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಸರ್ಕಾರ ಏನು ಮಾಡಬೇಕು ಎಂದು ಕಾನೂನು ತಜ್ಞರ ತಂಡ ಸ್ಪಷ್ಪಡಿಸಿದೆ ಎಂದು ಹೇಳಿದರು.
ರಾಜ್ಯದಿಂದ ನಾಲ್ವರು ಮೋದಿ ಸಂಪುಟದಲ್ಲಿದ್ದು, 15 ದಿನಗಳಿಗೊಮ್ಮೆ ಭೇಟಿಯಾಗಿ ಕರ್ನಾಟಕದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿನ ಥರ್ಮಲ್ ಘಟಕಗಳಿಗೆ ಕಲ್ಲಿದಲ್ಲು ಪೂರೈಕೆ ಸಮಸ್ಯೆಯಾಗುವುದಿಲ್ಲ, ಎಲ್ಲಾ ಕಡೆಗಳಲ್ಲಿ 15-16 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಬೇಡಿಕೆಗೆ ತಕ್ಕಂತೆ ಕಲಿದ್ದಲು ಪೂರೈಸಲಾಗುವುದು ಎಂದು ತಿಳಿಸಿದರು.