ರಾಜಕೀಯ

ಲೋಕಸಭೆ ಚುನಾವಣೆ ನಂತರ ದಿಕ್ಕು, ದೆಸೆ ಇಲ್ಲದಂತಾಗಿರುವ ಕಾಂಗ್ರೆಸ್; ಅತಂತ್ರದಲ್ಲಿ 'ಕೈ'ನಾಯಕರು

Sumana Upadhyaya
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದಲ್ಲಿ ನೀರವ ಮೌನ,ಜಡಗಟ್ಟಿದ ವಾತಾವರಣ. ರಾಜ್ಯ ರಾಜಧಾನಿಯಲ್ಲಿ ಚುನಾವಣೆಗೆ ಮೊದಲು ರಾರಾಜಿಸುತ್ತಿದ್ದ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಪೋಸ್ಟರ್ ಗಳು, ಬ್ಯಾನರ್ ಗಳು ಫಲಿತಾಂಶದ ಬಳಿಕ ಮೂಲೆಗೆ ಬಿದ್ದಿವೆ.
ದೇಶದ ಅತ್ಯಂತ ಹಳೆಯ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ನ ಬೆಂಗಳೂರು ಕಚೇರಿಯ ಸ್ಥಿತಿಗತಿ ಇದು. ಅಲ್ಲಿಗೀಗ ನಾಯಕರು, ಕಾರ್ಯಕರ್ತರು ಸುಳಿದಾಡುತ್ತಿಲ್ಲ,ಬಿಳಿ ಬಣ್ಣದ ಪೈಂಟಿಂಗ್ ನಿಂದ ನಳನಳಿಸುತ್ತಿದ್ದ ಕಚೇರಿ ಈಗ ಭಣಗುಡುತ್ತಿದೆ. ದೆಹಲಿ ಹೈಕಮಾಂಡ್ ನಿಂದ ಏನಾದರೊಂದು ಸೂಚನೆ, ಆದೇಶ ಬರಬಹುದೆಂದು ರಾಜ್ಯ ನಾಯಕರು ಕಾಯುತ್ತಲೇ ಇದ್ದಾರೆ.
ಇತ್ತ ಮೈತ್ರಿಕೂಟದಲ್ಲಿ ಸಚಿವ ಸ್ಥಾನ ಸಿಗದೆ, ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವ ನಾಯಕರು ಪಕ್ಷದ ನಾಯಕರ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಆಂತರಿಕ ಬಿಕ್ಕಟ್ಟು ಹೆಚ್ಚಾಗುತ್ತಲೇ ಇದೆ. ಹಿರಿಯ ನಾಯಕರುಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥ ಸಿದ್ದರಾಮಯ್ಯನವರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಮಾಜಿ ಸಚಿವ ಆರ್ ರೋಷನ್ ಬೇಗ್ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದು ಅವರಿಗೆ ಇದಕ್ಕೆ ನೊಟೀಸ್ ಕಳುಹಿಸಿದ್ದಕ್ಕೆ ಕ್ಯಾರೇ ಅಂದಿಲ್ಲ. ಆದರೆ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್ ನಿಂದ ಇನ್ನೂ ವಿಪ್ ಜಾರಿಯಾಗಿಲ್ಲ. ರೋಷನ್ ಬೇಗ್ ನಂತರ ರಾಮಲಿಂಗಾ ರೆಡ್ಡಿ ಕೂಡ ನಾಯಕತ್ವ ವಿರುದ್ಧ ಸಿಡಿದೆದ್ದಿದ್ದಾರೆ. ಲೋಕಸಭೆ ಚುನಾವಣೆ ವೇಳೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮತ್ತು ತಮ್ಮನ್ನು ಸಂಪುಟದಿಂದ ಹೊರಗಿಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಅಸಮಾಧಾನಗೊಂಡಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಮಧ್ಯೆ ಸಮನ್ವಯತೆ ತರುವಲ್ಲಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ ಎಂದು ಹಲವು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಇದುವೇ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಕಾಂಗ್ರೆಸ್ ನಲ್ಲಿ ಇನ್ನು ಕೆಲವರಿಗೆ ಸಿದ್ದರಾಮಯ್ಯ ನಾಯಕತ್ವದ ಮೇಲೆ ವಿಶ್ವಾಸವಿದೆ. ಆದರೆ ಅವರೊಬ್ಬರೇ ಕಾಂಗ್ರೆಸ್ ನ ಉಸ್ತುವಾರಿ ನೋಡಿಕೊಳ್ಳುವುದಲ್ಲ, ಬೇರೆ ನಾಯಕರುಗಳು ಸಹ ಬೇಕು ಎನ್ನುವುದು ಕೆಳಮಟ್ಟದ ನಾಯಕರ ಅಭಿಪ್ರಾಯ. ಆದರೆ ಇಡೀ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ನಿಯಂತ್ರಿಸುತ್ತಿರುವವರು ಯಾರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ, ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರೇ, ಕಾಂಗ್ರೆಸ್ ನಲ್ಲಿರುವವರಿಗೇ ಗೊತ್ತಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಮೋಹನ್ ರಾಮ್.
ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಪ್ರಭಾವ ಕುಗ್ಗಿರುವಾಗ ಲೋಕಸಭಾ ಚುನಾವಣೆ ನಂತರದ ಬೆಳವಣಿಗೆಗಳ ಬಗ್ಗೆ ರಾಜ್ಯ ಘಟಕಕ್ಕೆ ಏನೂ ಗೊತ್ತಾಗುತ್ತಿಲ್ಲ. ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಪವಾಡ ನಡೆಯಬೇಕಷ್ಟೆ ಎನ್ನುತ್ತಾರೆ ಅವರು.
ಇತ್ತೀಚಿನ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಕಂಡಿದೆ. ಆದರೆ ಪಕ್ಷ ಮುಂದುವರಿಯಲು, ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತೋರಿಸಲು ಮಾರ್ಗದರ್ಶನ ನೀಡಲು ನಾಯಕರು ಮತ್ತು ದಿಕ್ಕು ಇಲ್ಲದಂತಾಗಿದೆ.
ಇನ್ನೊಂದೆಡೆ ಕಳೆದುಕೊಂಡಿರುವ ವರ್ಚಸ್ಸನ್ನು ಹಿಂಪಡೆಯಲು ಜೆಡಿಎಸ್ ಯತ್ನಿಸುತ್ತಿದೆ. ಸ್ಥಳೀಯ ವಿಷಯಗಳು ಮತ್ತು ಸಮಸ್ಯೆಗಳಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಬರಗಾಲ ಅಧ್ಯಯನ ನಡೆಸಲು ಮತ್ತು ಸರ್ಕಾರವನ್ನು ಸಿಕ್ಕಿಹಾಕಿಸಲು ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ರಾಜ್ಯಾದ್ಯಂತ ಪ್ರವಾಸಕ್ಕೆ ಹೊರಟಿದ್ದಾರೆ.
SCROLL FOR NEXT