ರಾಜಕೀಯ

ಮಧ್ಯಂತರ ಚುನಾವಣೆ ಪ್ರಶ್ನೆಯೇ ಇಲ್ಲ: ಪುತ್ರ ನಿಖಿಲ್ ಮಾತಿಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

Raghavendra Adiga
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ, ಮಧ್ಯಂತರ ಚುನಾವಣೆ ಎದುರಾಗಬಹುದು, ಎಲ್ಲದಕ್ಕೂ ಸಿದ್ಧರಾಗಿ ಎಂಬ ಮುಖ್ಯಮಂತ್ರಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ಸ್ಪಷ್ಟೀಕರಣ ನೀಡಿದ್ದಾರೆ
ಪ್ರತಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದ ಪಕ್ಷದ ಕಾರ್ಯಕರ್ತರು ಸದಾ ಸಮಾಜ ಸೇವೆಗೆ ಸನ್ನದ್ಧರಾಗಿರಬೇಕು. ಚುನಾವಣೆ ಕಾಲದಲ್ಲಿ ಮಾತ್ರ ಹೋರಾಟ ಎನ್ನದೆ ಯಾವಾಗ ಚುನಾವಣೆ ಎದುರಾದರೂ ಜಯ ಗಳಿಸುವ ಸ್ಥಿತಿಯಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹುರಿದುಂಬಿಸಿದ್ದಾರೆ.
ಇದನ್ನು ಸಂದರ್ಭ ರಹಿತವಾಗಿ ಉಲ್ಲೇಖಿಸಿ ಮಾಧ್ಯಮಗಳಲ್ಲಿ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು ಎನ್ನುವಂತೆ ಬಿಂಬಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದ ಸಂಗತಿ. ಮೈತ್ರಿ ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ. ಮಧ್ಯಂತರ ಚುನಾವಣೆಯ ವಿಷಯವೇ ಈಗ ಅಪ್ರಸ್ತುತ ಎಂದು ತಿಳಿಸಿದ್ದಾರೆ.
ನಿಖಿಲ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದರು. ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಜಾಗ ಖಾಲಿ ಮಾಡಿ ಬಿಜೆಪಿ ಅಧಿಕಾರ ನಡೆಸಲಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸ್ಪಷ್ಟೀಕರಣ ನೀಡಿದ್ದಾರೆ.
SCROLL FOR NEXT