ರಾಜಕೀಯ

ಜೆಡಿಎಸ್ ಸಹ ಕುಮಾರಸ್ವಾಮಿ ಸಂಪುಟದಲ್ಲಿ ಮುಸ್ಲಿಮರಿಗೆ ಸ್ಥಾನ ನೀಡಬೇಕು: ವಿಶ್ವನಾಥ್

Lingaraj Badiger
ಬೆಂಗಳೂರು: ಮುಂಬರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಜೆಡಿಎಸ್ ನಿಂದ ಕನಿಷ್ಠ ಮುಸ್ಲಿಂ ಸಮುದಾಯದ ಒಬ್ಬ ಶಾಸಕನಿಗಾದರೂ ಅವಕಾಶ ಮಾಡಿಕೊಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ, ಜಾತ್ಯತೀತ ಪಕ್ಷವಾದ ಜೆಡಿಎಸ್ ಸಹ ಮುಸ್ಲಿಮರಿಗೆ ಕಡೇ ಪಕ್ಷ ಸಚಿವ ಸ್ಥಾನವನ್ನಾದರೂ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಮುಸ್ಲಿಂ ಸದಸ್ಯರಿಗೆ ಪ್ರಾತಿನಿಧ್ಯ ನೀಡಲಾಗಿದೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅವಧಿಯಲ್ಲೂ ಮುಸ್ಲಿಮ್‌ ಸಮುದಾಯದ ಸದಸ್ಯರಿಗೆ ಸಂಪುಟ ದರ್ಜೆ ಮಂತ್ರಿಸ್ಥಾನ ನೀಡಲಾಗಿತ್ತು ಎಂಬ ವಿಷಯವನ್ನು ಅವರು ವರಿಷ್ಠರ ಗಮನಕ್ಕೆ ತಂದರು.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಜನಾಂಗ ಪಕ್ಷಕ್ಕೆ ಬೆಂಬಲಕೊಟ್ಟಿದೆ ಎಂಬುದನ್ನು ವಿಶ್ವನಾಥ್ ಒತ್ತಿ ಹೇಳಿದ್ದಾರೆ.
ಜೆಡಿಎಸ್ ಕೋಟಾದಲ್ಲಿ ದಲಿತ ಸಮುದಾಯಕ್ಕೆ ಒಂದು ಸಚಿವ ಪದವಿಯನ್ನು ಮೀಸಲಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸೋಲಿನ ಕಾರಣ ನೈತಿಕ ಹೊಣೆ ಹೊತ್ತು ಅವರು ಪಕ್ಷದ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರೂ ಪಕ್ಷ ಅದನ್ನು ಇದುವರೆಗೆ ಅಂಗೀಕಾರ ಮಾಡಿಲ್ಲ.
SCROLL FOR NEXT