ದೆಹಲಿಯ ಕರ್ನಾಟಕ ಭವನದಲ್ಲಿ ಬಿಜೆಪಿ ಸಂಸದರಾದ ಬಿ ಎನ್ ಬಚ್ಚೇಗೌಡ ಮತ್ತು ಜಿ ಎಂ ಸಿದ್ದೇಶ್ವರ ಅವರ ಜೊತೆ ಮಾತುಕತೆಯಲ್ಲಿ ಸಿದ್ದರಾಮಯ್ಯ
ಬಳ್ಳಾರಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳ ಸೋಲಿಗೆ ಕರ್ನಾಟಕದಲ್ಲಿ ಏನೇನು ಕಾರಣಗಳು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ದೆಹಲಿಯಲ್ಲಿ ವಿವರಿಸಿ ಬಂದಿದ್ದರು.
ಇದೀಗ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿಯವರಿಗೆ ವಿವರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.
ನಿನ್ನೆ ಸಿದ್ದರಾಮಯ್ಯನವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪಕ್ಷದ ಹಿರಿಯ ನಾಯಕ ಎ ಕೆ ಆಂಟನಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದರು.
ಇತ್ತೀಚೆಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದ ದೇವೇಗೌಡರು ರಾಜ್ಯದಲ್ಲಿ ಮೈತ್ರಿಕೂಟಗಳು ಸುಗಮವಾಗಿ ಸಾಗಲು ಕಾಂಗ್ರೆಸ್ ನಾಯಕತ್ವ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿಲ್ಲ, ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಅಸಮಾಧಾನ, ಭಿನ್ನಾಭಿಪ್ರಾಯಗಳಿಂದಲೇ ತುಮಕೂರಿನಲ್ಲಿ ತಮಗೆ ಮತ್ತು ಮಂಡ್ಯದಲ್ಲಿ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಸೋಲಾಯಿತು ಎಂಬುದನ್ನು ದೇವೇಗೌಡರು ರಾಹುಲ್ ಗಾಂಧಿ ಮುಂದೆ ಅಸಮಾಧಾನ ತೋಡಿಕೊಂಡಿದ್ದರು.
ಲೋಕಸಭೆ ಫಲಿತಾಂಶದಲ್ಲಿ ಹೀನಾಯ ಸೋಲು ರಾಜ್ಯದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ನಾಯಕತ್ವ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತದೆ. ಅನೇಕ ಹಿರಿಯ ನಾಯಕರು ಅವರ ಕಾರ್ಯವೈಖರಿಗೆ ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್ ಘಟಕದ ಪುನರ್ರಚನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವಿಷಯಗಳು ಇಂದಿನ ಸಿದ್ದರಾಮಯ್ಯ ಭೇಟಿಯ ಮಾತುಕತೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos