I tried to dissuade his grandsons from entering politics but they did not listen: Deve Gowda
ಮಂಗಳೂರು: ರಾಜಕಾರಣಕ್ಕೆ ಬಾರದಂತೆ ನನ್ನ ಮೊಮ್ಮಕ್ಕಳನ್ನು ತಡೆಯಲು ಯತ್ನಿಸಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಸುಳಿವು ನೀಡಿದ್ದಾರೆ.
ನಾನು ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತಿಲ್ಲ. ನಮ್ಮದು ಸಾಂಪ್ರದಾಯಿಕ ರಾಜಕಾರಣದ ಕುಟುಂಬವಲ್ಲ, ಮೂಲತಃ ಕೃಷಿಕ ಮನೆತನ ಎಂಬುದು ಎಲ್ಲರಿಗೂ ತಿಳಿದಿದೆ. ನನ್ನ ಮೊಮ್ಮಕ್ಕಳನ್ನು ರಾಜಕಾರಣ ಪ್ರವೇಶಿಸದಂತೆ,ತಡೆಯಲು ಯತ್ನಿಸಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ ಎಂದು ದೇವೇಗೌಡ ಹೇಳಿದ್ದಾರೆ.
ಮಂಡ್ಯದಿಂದ ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಸಕ್ತಿ ತೋರಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡ, ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳಾಗುವುದು ತಪ್ಪೇನು ಅಲ್ಲ, ಮಂಡ್ಯದಿಂದ ಸ್ಪರ್ಧಿಸಲು ನಿಖಿಲ್ ಕೂಡ ಆಕಾಂಕ್ಷಿಯಾಗಿದ್ದಾರೆ. ಪ್ರಜ್ವಲ್ ರೇವಣ್ಣ ಬಿ.ಇ ಮುಕ್ತಾಯಗೊಳಿಸಿದ ಬಳಿಕ ಹಾಸನದ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಈಗ ನಿಖಿಲ್ ಸಹ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ತೋರಿದ್ದಾರೆ. ನಾನು ಪ್ರಜ್ವಲ್ ನ್ನು ಮಾತ್ರ ಉತ್ತೇಜಿಸುತ್ತಿದ್ದೇನೆ ಎಂಬ ಭಾವನೆ ನಿಖಿಲ್ ಗೆ ಬರಬಾರದು. ಆದ್ದರಿಂದ ನಿಖಿಲ್ ಸ್ಪರ್ಧೆಗೂ ನನ್ನ ಸಹಮತವಿದೆ ಎಂದು ದೇವೇಗೌಡ ತಿಳಿಸಿದ್ದಾರೆ.
ಇನ್ನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ನಡುವಿನ ಸ್ಥಾನ ಹಂಚಿಕೆ ಇನ್ನೆರಡು ವಾರಗಳಲ್ಲಿ ಅಂತಿಮವಾಗಲಿದೆ ಎಂದು ದೇವೇಗೌಡ ತಿಳಿಸಿದ್ದಾರೆ.