ರಾಜಕೀಯ

ಮೋದಿಗೆ ನಾಚಿಕೆ ಆಗಬೇಕು, ಯಾವ ನದಿಯಲ್ಲಿ ಮುಳುಗೆದ್ರೂ ನಿಮ್ಮ ಮನಸ್ಥಿತಿ ಬದಲಾಗಲ್ಲ: ಸಿದ್ದರಾಮಯ್ಯ

Lingaraj Badiger
ಬೆಂಗಳೂರು: ವಿದ್ಯಾರ್ಥಿಗಳ ಕಲಿಕೆಯ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿದ ನಿಮಗೆ ನಾಚಿಕೆ ಆಗಬೇಕು. ನೀವು ಇದಕ್ಕಿಂತ ಕೆಳಮಟ್ಟಕ್ಕೆ ಇಳಿಯಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲೆಳೆದ ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ.
'ಈಗಷ್ಟೆ ಪ್ರಧಾನಿ ಮೋದಿ ಅವರು ಡಿಸ್‌ಲೆಕ್ಸಿಯಾ (ಕಲಿಕಾ ಸಾಮರ್ಥ್ಯ ಕುಂಠಿತ ಇರುವವರು) ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜಕೀಯ ಮಾಡಿರುವ ವೀಡಿಯೋ ಗಮನಿಸಿದೆ. ಪ್ರಧಾನಿ ಮೋದಿಗೆ ನಾಚಿಕೆ ಆಗಬೇಕು. ನೀವು ಇದಕ್ಕಿಂತ ಕೀಳು ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಯಾವ ನದಿಯಲ್ಲಿ ಮುಳುಗಿದರು ನಿಮ್ಮ ಮನಸ್ಥಿತಿ ಬದಲಾಗುವುದಿಲ್ಲ. ವಿದ್ಯಾರ್ಥಿಗಳ ಕಲಿಕೆ ಮಂದಗತಿಯಲ್ಲಿ ಸಾಗಬಹುದು. ಆದರೆ, ನಿಮ್ಮಂತೆ ಹೃದಯ ಹೀನರಲ್ಲ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕಳೆದ ಶನಿವಾರ ಡೆಹ್ರಾಡೂನ್ ನಲ್ಲಿ ನಡೆದ ಪ್ರಧಾನಿ ಮೋದಿ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ಡಿಸ್‌ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ತಾರೆ ಜಮೀನ್ ಪರ್ ಸಿನಿಮಾದಲ್ಲಿ ನೋಡಿರುವಂತೆ ಮಕ್ಕಳು ಅತ್ಯಂತ ಬುದ್ದಿವಂತರಾಗಿರುತ್ತಾರೆ ಎಂದು ವಿವರಿಸಿದ್ದರು. 
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, 40-50 ವರ್ಷದ ಮಕ್ಕಳಿಗೂ ಉಪಯೋಗವಾಗುತ್ತಾ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಕಾಲೆಳೆದಿದ್ದರು. ಮೋದಿ ಮಾತು ಕೇಳುತ್ತಿದ್ದಂತೆ ಅಲ್ಲಿರುವ ವಿದ್ಯಾರ್ಥಿಗಳು ನಗಲಾರಂಭಿಸಿ ಚಪ್ಪಾಳೆ ತಟ್ಟಿದರು. 
ಬಳಿಕ ಆಗುತ್ತೆ ಸರ್ ಎಂದು ವಿದ್ಯಾರ್ಥಿನಿ ಉತ್ತರಿಸಿದ್ದರು. ಆಗ ಮೋದಿ ಅವರು ಹಾಗಾದರೆ ಅಂಥ ಮಕ್ಕಳ ತಾಯಂದಿರು ತುಂಬಾ ಖುಷಿಯಾಗುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಟಾಂಗ್ ನೀಡಿದ್ದರು. 
SCROLL FOR NEXT