ಉಮೇಶ್ ಜಾಧವ್ ಮತ್ತು ಸಿದ್ದರಾಮಯ್ಯ
ಹುಬ್ಬಳ್ಳಿ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರ ರಾಜಿನಾಮೆ ಅಂಗೀಕರಾವಾಗುವುದು ಕಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದ ಉಮೇಶ್ ಜಾಧವ್ ಸೇರಿದಂತೆ ಕಾಂಗ್ರೆಸ್‌ನ ನಾಲ್ವರು ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಅವರಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇದೆ. ನನ್ನ ಅರಿವಿನ ಪ್ರಕಾರ, ಈ ಸಂದರ್ಭದಲ್ಲಿ ಅವರ ರಾಜೀನಾಮೆ ಅರ್ಜಿ ಸ್ವೀಕಾರವಾಗುವುದಿಲ್ಲ ಎಂದು ಹೇಳಿದ್ದಾರೆ.
ಉಮೇಶ್ ಜಾಧವ್, ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದೇನೆ. ಈ ಅರ್ಜಿ ವಿಚಾರಣೆಗೆ ಬಾಕಿ ಇದೆ. ಸುಪ್ರೀಂಕೋರ್ಟ್‌ನಲ್ಲಿಯೂ ಒಂದು ಅರ್ಜಿ ವಿಚಾರಣೆಗೆ ಬಾಕಿ ಇದೆ. ನನ್ನ ಪ್ರಕಾರ ಈ ಅರ್ಜಿಯ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಅವರ ರಾಜೀನಾಮೆ ಅಂಗೀಕಾರವಾಗುವುದಿಲ್ಲ. ಆದರೆ ಈ ವಿಷಯದಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಉಮೇಶ್ ಜಾದವ್ ಕಾಂಗ್ರೆಸ್ ಟಿಕೆಟ್‌ನಿಂದ ಎರಡು ಬಾರಿ ಗೆದ್ದವರು. ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಿ ಇದೀಗ ಅವರು ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿಯ ಹಣ ಆಮಿಷಕ್ಕೆ ಅವರು ಬಲಿಯಾಗಿದ್ದಾರೆ, ಇಲ್ಲಿ 20ರಿಂದ 30 ಕೋಟಿ ರೂ.ವ್ಯಾಪಾರ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.