ಬೆಂಗಳೂರು: ಲೋಕಸಭಾ ಚುನಾವಣೆ 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ನಟಿ ಸುಮಲತಾ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಅವರ ಯಾವುದೇ ಚಿತ್ರಗಳನ್ನು ಪ್ರಸಾರ ಮಾಡಬಾರದು ಎಂದು ಚುನಾವಣಾ ಆಯೋಗ ಆದೇಶ ಜಾರಿ ಮಾಡಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಆಯುಕ್ತೆ ಎನ್. ಮಂಜುಶ್ರೀ ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ದೂರದರ್ಶನದಲ್ಲಿ ಇವರ ಚಿತ್ರಗಳನ್ನು ಪ್ರಸಾರ ಮಾಡದಂತೆ ಕೋರಿದ್ದರು. ಈ ನಿಯಮ ಖಾಸಗಿ ವಾಹಿನಿಗಳು ಹಾಗೂ ಚಿತ್ರಮಂದಿರಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ಮನವಿಯನ್ನು ಚುನಾವಣಾ ಆಯೋಗ ಪುರಸ್ಕರಿಸಿದೆ.
ನಿಖಿಲ್ ಎರಡು ಚಿತ್ರಗಳಲ್ಲಿ ನಟಿಸಿದರೆ, ಸುಮಲತಾ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗಾಗಿ, ನಿಖಿಲ್ ಮತ್ತು ಸುಮಲತಾ ನಟನೆಯ ಸಿನಿಮಾಗಳನ್ನು ಚುನಾವಣೆ ಪೂರ್ಣಗೊಳ್ಳುವವರೆಗೆ ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಪ್ರಸಾರ ಮಾಡಬಾರದು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಮಂಡ್ಯದಲ್ಲಿ ಏ.18ರಂದು ಚುನಾವಣೆ ನಡೆಯಲಿದೆ. ಮತದಾನ ಮುಕ್ತಾಯದವರೆಗೂ ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ಈ ಇಬ್ಬರು ನಟರ ಸಿನಿಮಾ ಪ್ರದರ್ಶನ ಮಾಡದಂತೆ ನಿರ್ಬಂಧ ಹೇರಿದೆ.
ಆದರೆ ಸುಮಲತಾ ಅವರ ಬೆಂಬಲಕ್ಕೆ ನಿಂತು ಅವರ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಹಾಗೂ ಯಶ್ ಅವರ ಸಿನಿಮಾಗಳಿಗೂ ನಿರ್ಬಂಧ ಹೇರುವಂತೆ ಮನವಿ ಸಲ್ಲಿಸಲಾಗಿತ್ತಾದರೂ ಈ ಇಬ್ಬರು ನಟರು ಸ್ಪರ್ಧಿಗಳಲ್ಲ. ಹೀಗಾಗಿ ಈ ಬಗ್ಗೆ ಆಯೋಗ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ಈಗ ತಾನೇ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಜಾಗ್ವಾರ್, ಸೀತಾರಾಮ ಕಲ್ಯಾಣ ಚಿತ್ರಗಳು ಈಗಾಗಲೇ ತೆರೆ ಕಂಡಿದ್ದು, ಅವರ ಅಭಿನಯದ ಕುರುಕ್ಷೇತ್ರ ಚಿತ್ರ ಇನ್ನೂ ತೆರೆ ಕಂಡಿಲ್ಲ. ಇನ್ನು ಸುಮಲತಾ ಕನ್ನಡ, ತೆಲುಗು, ತಮಿಳು ಸೇರಿ ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.