ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸುಮಲತಾ ಅಂಬರೀಶ್ ಅವರು ಇಂದು ಸಾವಿರಾರು ಬೆಂಬಲಿಗರೊಂದಿಗೆ ಬಂದು ಪಕ್ಷೇತ್ತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅವರು ನೇರವಾಗಿ ಮಂಡ್ಯ ತಾಲೂಕು ಇಂಡುವಾಳಿಗೆ ಆಗಮಿಸಿ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರ ನಿವಾಸಕ್ಕೆ ತೆರಳಿದರು. ನಟ ಯಶ್ ಅವರೂ ಸಚ್ಚಿದಾನಂದ ನಿವಾಸಕ್ಕೆ ಆಗಮಿಸಿದರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುಮಲತಾ ಅವರೊಂದಿಗೆ ಪುತ್ರ ಅಭಿಷೇಕ್, ನಟ ಯಶ್, ರಾಕಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್ ಸೋದರನ ಪುತ್ರ ಮಧುಸೂದನ್ ಸೇರಿದಂತೆ ಹಲವರು ಇದ್ದರು.
ಸುಮಲತಾ ಅವರು ನಾಮಪತ್ರ ಸಲ್ಲಿಸುವ ವೇಳೆ ಕೆಲ ಕಾಂಗ್ರೆಸ್ ನಾಯಕರು, ಅಂಬರೀಶ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಅಭಿಮಾನಿಗಳು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಸುಮಲತಾ ಅವರು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶಕ್ಕೆ ಮೆರವಣಿಗೆ ಮೂಲಕ ತೆರಳಿದರು.
ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸುಮಲತಾ ಅವರನ್ನು ಬೆಂಬಲಿಸುತ್ತಿದ್ದು, ಸಂಧಾನಕ್ಕಾಗಿ ಪಕ್ಷದ ವರಿಷ್ಠರು ಜಿಲ್ಲೆಗೆ ಆಗಮಿಸುವುದು ಬೇಡ. ಜಿಲ್ಲೆಯಲ್ಲಿ ಪಕ್ಷದ ಉಳಿವಿಗಾಗಿ ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿಕೆ ನೀಡಿದ್ದರು.
ಅದರಂತೆ ಇಂದು ಸುಮಲತಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಮಲತಾ ಪರವಾಗಿ ಮೂವತ್ತು ಸೂಚಕರು ಸಹಿ ಹಾಕಿದ್ದು, ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಮಂಡ್ಯ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ಮೆರವಣಿಗೆಯಲ್ಲಿ ಚಿತ್ರರಂಗದ ಗಣ್ಯರಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕ ನಟ ನಟಿಯರು ಭಾಗಿಯಾಗಿದ್ದರು.
ನಾಮಪತ್ರ ಸಲ್ಲಿಕೆ ಹಾಗೂ ಜಾಥಾ ಸಂದರ್ಭದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.