ರಾಜಕೀಯ

ಐಟಿ ದಾಳಿ ರಾಜಕೀಯ ಪ್ರೇರಿತ, ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ದೋಸ್ತಿ ನಾಯಕರ ವಾಗ್ದಾಳಿ

Nagaraja AB

ಬೆಂಗಳೂರು: ಲೋಕಸಭಾ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಂತೆಯೇ  ಸಚಿವರು ಹಾಗೂ ಅವರ ಬೆಂಬಲಿಗರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರಾಗಿರುವ ಬಾಲಕೃಷ್ಣ ಅವರು ರಾಜಕೀಯ ಪಕ್ಷಗಳಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕು  ಎಂದು ಒತ್ತಾಯಿಸಿದರು.
ಸ್ವಾತಂತ್ರ್ಯ ಬಂದ ನಂತರ ಯಾವತ್ತೂ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಆಗಿರಲಿಲ್ಲ, ಆದರೆ, ಮೋದಿ ನೇತೃತ್ವದ  ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೂಲೆ ಮಾಡುತ್ತಿದೆ  ಎಂದು ಆರೋಪಿಸಿದರು.
ಸಂಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ಕಾರಣಕ್ಕಾಗಿ ಐಟಿ ದಾಳಿ ಮಾಡಲಾಗುತ್ತಿದ್ದು, ಎಚ್ಚರಿಕೆ ಕೊಡಲಿಕೆ ಸಾಂಕೇತಿಕವಾಗಿ ಮೈತ್ರಿ ಪಕ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರಿಗೆ ಸಂವಿಧಾನದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಿಜೆಪಿಯ ಅನೇಕ ಜನರ ಮೇಲೆ ಆರೋಪಗಳಿವೆ. ಆದರೆ, ಬಿಜೆಪಿ ನಾಯಕರ ಮೇಲೆ ದಾಳಿ ನಡೆಸದ ಆದಾಯ ತೆರಿಗೆ ಇಲಾಖೆ ಈಗ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದರು.
ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಗೆ ಸೋಲಿನ ಭಯದಿಂದ ಇಡೀ ದೇಶದಲ್ಲಿ ಪ್ರತಿಪಕ್ಷಗಳ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಐಟಿ ದಾಳಿ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅರುಣ್ ಜೇಟ್ಲಿ ಅವರ ಕೈವಾಡವಿದ್ದು, ಪ್ರತಿಪಕ್ಷ ನಾಯಕರನ್ನು ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದಲ್ಲಿ  ಬಿಜೆಪಿಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ,ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ಸೋಮನಹಳ್ಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಐಟಿ ದಾಳಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ  ಜೆಡಿಎಸ್ ಸಚಿವರು ಹಾಗೂ ಬೆಂಬಲಿಗರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.ಐಟಿ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು, ಎಜೆಂಟ್ ರೀತಿಯಲ್ಲಿ ಕೆಲಸ ಮಾಡಬಾರದು ಎಂದರು.

ಆಕಾಶದಲ್ಲಿ ನಿಷ್ಕ್ರೀಯಗೊಂಡಿದ್ದ ಸ್ಯಾಟಲೈಟ್  ಹೊಡೆದು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಲಿಲ್ಲವೇ?  ಚುನಾವಣಾ ಆಯೋಗ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಸಣ್ಣತನದ ರಾಜಕೀಯದ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಆದರೆ, ಕರ್ನಾಟಕದಿಂದಲೇ ಬಿಜೆಪಿಯ ಪತನವಾಗಲಿದೆ ಎಂದು ಭವಿಷ್ಯ ನುಡಿದರು. ಬಿಜೆಪಿಯವರು ಸತ್ಯ ಹರಿಶ್ಚಂದ್ರನಾ ಕುಟುಂಬಸ್ಥರೇ ? ಅವರು ಭ್ರಷ್ಟಾಚಾರ ಮಾಡಿಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಸಚಿವ  ಡಿಕೆ ಶಿವಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು  ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
SCROLL FOR NEXT