ರಾಜಕೀಯ

ಮಂಡ್ಯದಲ್ಲಿ ಮೈತ್ರಿ ಧರ್ಮ‌ ಪಾಲನೆ ಆಗಿಲ್ಲ, ಆದ್ರೂ ಅತೃಪ್ತರ ವಿರುದ್ಧ ಕ್ರಮ ಇಲ್ಲ: ದಿನೇಶ್ ಗುಂಡೂರಾವ್

Lingaraj Badiger
ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಲಿಕ್ಕೆ ಸಾಧ್ಯವಾಗಿಲ್ಲ ಇದೆಲ್ಲದಕ್ಕೂ ಫಲಿತಾಂಶವೇ ಉತ್ತರ ಕೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಹೇಳಿದ್ದಾರೆ. 
ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಭೇಟಿ ನಂತರ ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಅಮಾನತ್ತಾದ ಮಂಡ್ಯದ ಸಚ್ಚಿದಾನಂದ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರು ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ಭೋಜನಕ್ಕೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೇವೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅದಕ್ಕೆ ಯಾವುದೇ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದರು.
ತಾವು ಇದುವರೆಗೂ ಭೋಜನಕೂಟದ ವೀಡಿಯೋ ನೋಡಿಲ್ಲ. ಪೇಪರ್ ನಲ್ಲಿ ಫೋಟೋ ನೋಡಿ ಅವರನ್ನು ಕರೆಸಿ ಮಾತನಾಡಿದೆ. ವೀಡಿಯೋ ಕುರಿತು ತಮ್ಮ ಬಳಿ ಮುಖ್ಯಮಂತ್ರಿ ಅವರು ಏನು  ಮಾತನಾಡಿಲ್ಲ. ಜೊತೆಗೆ ಕೆಸಿ ವೇಣುಗೋಪಾಲ್ ಗೆ ಮುಖ್ಯಮಂತ್ರಿ ಅವರು ಕರೆ ಮಾಡಿ ವಿಡಿಯೋ ಬಿಡುಗಡೆ ಹಾಗೂ ಭೋಜನಕೂಟ ಬಗ್ಗೆ ಕ್ರಮಕ್ಕೆ ಆಗ್ರಹ ಮಾಡಿರುವ ಬಗ್ಗೆಯೂ ‌ತಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಮಂಡ್ಯ ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಈಗಾಗಲೇ ಇದನ್ನ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೋಸ್ತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೋಸ್ತಿ ಮಾಡಿಕೊಳ್ಳುವುದು ಬಿಡುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ. ಸ್ಥಳೀಯ ನಾಯಕರೇ ಆ ಬಗ್ಗೆ ತೀರ್ಮಾನ ಮಾಡಬೇಕು. ಒಂದು ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬಹುದು. ಬಿಜೆಪಿ ಹೊರತುಪಡಿಸಿದಂತೆಯೂ ಚುನಾವಣೆ ಎದುರಿಸಬಹುದು. ಇಲ್ಲವಾದಲ್ಲಿ ಸ್ವತಂತ್ರವಾಗಿಯೂ ಚುನಾವಣೆಗೆ ಹೋಗಬಹುದು. ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ  ಸ್ಪರ್ಧೆ ಮಾಡಿದ್ದೇವೆ. ಸ್ಥಳೀಯ ಮಟ್ಟದಲ್ಲಿ ದೋಸ್ತಿ ಬೇಕು ಬೇಡ ಎಂಬುದು ಸ್ಥಳೀಯ ‌ನಾಯಕರಿಗೆ ಬಿಟ್ಟಿದ್ದು ಎಂದು ದಿನೇಶ್ ‌ಗುಂಡುರಾವ್ ಸ್ಪಷ್ಟಪಡಿಸಿದರು.
SCROLL FOR NEXT