ಬೆಂಗಳೂರು: ಕುಂದಗೋಳ ಉಪಚುನಾವಣೆ ಉಸ್ತುವಾರಿ ಗೊಂದಲವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಗೆಹರಿಸಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಗೆ ಕುಂದಗೋಳ ಉಸ್ತುವಾರಿ ನೀಡಿದ್ದಕ್ಕೆ ಸತೀಶ್ ಜಾರಕಿಹೊಳಿ ಬೇಸರಗೊಂಡು ಅಸಮಾಧಾನ ಹೊರಹಾಕಿದ್ದರು. ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚುತ್ತಿದ್ದು ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿ, ಉತ್ತರ ಕರ್ನಾಟಕದಲ್ಲಿ ಅವರ ಪ್ರಾಬಲ್ಯ ವಿಸ್ತರಿಸುವುದು ಬೇಡವೆಂದು ಕುಂದಗೋಳದಲ್ಲಿ ಸತೀಶ್ ಜಾರಕಿಹೊಳಿ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂದು ಇಬ್ಬರು ಸಚಿವರನ್ನು ತಮ್ಮ ನಿವಾಸ ಕಾವೇರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು ಗೊಂದಲ ನಿವಾರಿಸಿದ್ದಾರೆ. ಇಬ್ಬರು ಪ್ರಮುಖ ಸಮುದಾಯಗಳ ನಾಯಕರಾಗಿದ್ದು, ಈ ಉಪ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಸಚಿವರುಗಳೇ ಕಿತ್ತಾಡಿಕೊಂಡರೆ ಕಾರ್ಯಕರ್ತರು ಹಾಗೂ ಬಿಜೆಪಿ ಇದರ ಲಾಭ ಪಡೆಯಬಹುದು. ಇಬ್ಬರು ತಮ್ಮ ಪ್ರಭಾವ ಬಳಸಿ ಅಭ್ಯರ್ಥಿ ಗೆಲ್ಲಿಸುವತ್ತ ಗಮನ ಹರಿಸಿ ಎಂದು ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ಗೆ ತಿಳಿ ಹೇಳಿದ್ದಾರೆ ಎನ್ನಲಾಗಿದೆ.
ಸುಮಾರು ಒಂದೂ ಗಂಟೆಗೂ ಅಧಿಕ ಸಮಯ ಇಬ್ಬರು ನಾಯಕರೊಂದಿಗೆ ಚರ್ಚಿಸಿದ ಬಳಿಕ ಮೂವರು ನಾಯಕರು ಒಂದೇ ಕಾರಿನಲ್ಲಿ ಎಚ್ ಎಎಲ್ ವಿಮಾನ ನಿಲ್ದಾಣದತ್ತ ತೆರಳಿದ್ದಾರೆ. ಮೂವರು ನಾಯಕರು ಒಂದೇ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿ ಅಲ್ಲಿಂದು ಕುಂದಗೋಳಕ್ಕೆ ಪ್ರಯಾಣ ಬೆಳೆಸಿದರು. ಸಂಜೆ ಪಕ್ಷದ ಅಭ್ಯರ್ಥಿ ಪರ ಆಯೋಜಿಸಿರುವ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದರು.
ನಿನ್ನೆಯಷ್ಟೆ ಸಚಿವ ಜಮೀರ್ ಅಹಮದ್ ಖಾನ್ ಹುಬ್ಬಳ್ಳಿಗೆ ತೆರಳಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಸಚಿವರು ನಡುವಿನ ಗೊಂದಲಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗೆಹರಿಸುವ ಮೂಲಕ ಒಟ್ಟಾಗಿ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos