ರಾಜಕೀಯ

ಭೂ ಮಾಫಿಯಾ ಶಕ್ತಿಗಳಿಗೆ ಸಿದ್ದರಾಮಯ್ಯ ಪ್ರೋತ್ಸಾಹ: ಗೋವಿಂದ ಕಾರಜೋಳ

Lingaraj Badiger
ಬೆಂಗಳೂರು: ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಭೂ ಮಾಫಿಯಾ ಶಕ್ತಿಗಳಿಗೆ ಉತ್ತೆಜನ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. 
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕ ಸಿದ್ದರಾಮಯ್ಯ ಸ್ವತಃ ಓಬಿಸಿ ನಾಯಕನಂತೆ ಬಿಂಬಿಸಿಕೊಂಡು ಬೆಂಗಳೂರಿನ ಸುತ್ತಮುತ್ತಲ ಭೂ ಮಾಫಿಯಾ ಶಕ್ತಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅವರ ಜೊತೆ ಸಿದ್ದರಾಮಯ್ಯ ಅವರನ್ನು ಯಾವುದೆ ಕಾರಣಕ್ಕೂ ಹೋಲಿಕೆ ಮಾಡುವುದು ತರವಲ್ಲ ಮತ್ತು ಸೂಕ್ತವೂ ಅಲ್ಲ ಎಂದರು.
ಅಧಿಕಾರ ದಾಹ, ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ತಮ್ಮ ಅನುಯಾಯಿಗಳ ಮೂಲಕ ತಮ್ಮನ್ನು ತಾವೇ ನಾಯಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ  ಕನಿಷ್ಠ ಅರ್ಧ ಡಜನ್ ನಾಯಕರು, ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷಿಯಾಗಿದ್ದಾರೆ ಎಂದರು. 
ಮುಖ್ಯಮಂತ್ರಿ ಹುದ್ದೆಗೆ ಹೆಚ್ಚಿನ ಪೈಪೋಟಿಯಿಂದ ರಾಜ್ಯ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಛಿದ್ರ ಛಿದ್ರವಾಗಲಿದೆ ಎಂದು ಭವಿಷ್ಯ ನುಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜಕೀಯ ಬಿಟ್ಟು ರಾಜ್ಯವನ್ನು ಕಾಡುತ್ತಿರುವ ಬರ, ಜನ-ಜಾನುವಾರುಗಳ ಬವಣೆ ನೀಗಿಸಲು ಗಮನಹರಿಸಲಿ ಎಂದು ಅವರು ಸಲಹೆ ಮಾಡಿದರು.
SCROLL FOR NEXT