ಮುಖ್ಯಮಂತ್ರಿಯಾಗಿ ಕಳೆದ ವರ್ಷ ವಿಧಾನಸೌಧ ಮುಂದೆ ಪ್ರಮಾಣವಚನ ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ತೀವ್ರ ಹೋರಾಟ, ಒಳಮುನಿಸುಗಳ ನಡುವೆ ಕೊನೆಗೂ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಗುರುವಾರ ಒಂದು ವರ್ಷ ಪೂರೈಸಿದೆ.
2018, ಮೇ 23 ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಪಾಲಿಗೆ ಅತ್ಯಂತ ಮುಖ್ಯವಾದ ದಿನವಾಗಿತ್ತು. ಸುಮಾರು ದಶಕದ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್ ನಿಂದ ಕುಮಾರಸ್ವಾಮಿಯವರು ವಿಧಾನಸೌಧದ ಮುಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಬಿಜೆಪಿ ವಿರೋಧಿ ಪಕ್ಷಗಳ ರಾಜಕೀಯ ಗಣ್ಯರು ಹಾಜರಾಗಿದ್ದರು. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ವಿರುದ್ಧವಾಗಿ ಮಹಾಘಟಬಂಧನ ರಚನೆಯಾಗಿ ಅದರ ಮುಂದಾಳತ್ವವನ್ನು ಹೆಚ್ ಡಿ ದೇವೇಗೌಡರು ವಹಿಸಬೇಕೆಂಬ ಚರ್ಚೆಗಳು ರಾಷ್ಟ್ರಮಟ್ಟದಲ್ಲಿ ನಡೆದವು.
ಇವೆಲ್ಲಾ ಆಗಿ ಒಂದು ವರ್ಷ ಕಳೆದಿದೆ. ಇಂದಿನ ಫಲಿತಾಂಶ ರಾಷ್ಟ್ರಮಟ್ಟದ ರಾಜಕೀಯದಲ್ಲಿ ದೇವೇಗೌಡರ ಮುಂದಿನ ಪಾತ್ರವನ್ನು ನಿರ್ಧರಿಸಲಿದೆ. ರಾಜ್ಯ ಮೈತ್ರಿ ಸರ್ಕಾರದ ಅಸ್ಥಿತ್ವ ಮತ್ತು ಭವಿಷ್ಯವನ್ನು ಕೂಡ ನಿರ್ಧರಿಸಲಿದೆ.
ಕಳೆದ 365 ದಿನಗಳಲ್ಲಿ ಸಿಎಂ ಮತ್ತು ಕಾಂಗ್ರೆಸ್ ಸಚಿವರುಗಳು ಮೈತ್ರಿ ಸರ್ಕಾರದಲ್ಲಿ ತಮ್ಮ ಬಹುತೇಕ ಸಮಯಗಳನ್ನು ಚುನಾವಣೆ ಸ್ಪರ್ಧೆಯಲ್ಲಿಯೇ ಕಳೆದರು. 2018ರಲ್ಲಿ ಉಪ ಚುನಾವಣೆಯಾಯಿತು, ನಂತರ ಲೋಕಸಭೆ ಚುನಾವಣೆ ಹಾಗೂ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆಗಳು ಎದುರಾದವು.
ಕಳೆದ ವರ್ಷ ಮೈತ್ರಿ ಸರ್ಕಾರ ರಚನೆಯಾದ ನಂತರ ಕೆಲ ತಿಂಗಳುಗಳು ಸಚಿವ ಸಂಪುಟ ರಚನೆ ಮತ್ತು ನಿಗಮ-ಮಂಡಳಿಗಳಿಗೆ ನೇಮಕಾತಿಯಲ್ಲಿ ಹೋದವು. ಪ್ರತಿದಿನ ಎಂಬಂತೆ ಸರ್ಕಾರಕ್ಕೆ ಸವಾಲುಗಳು, ಟೀಕೆಗಳು ಎದುರಾದವು. ಸಮ್ಮಿಶ್ರ ಸರ್ಕಾರ ಒಂದು ವರ್ಷ ಕೂಡ ಬಾಳುತ್ತದೆ ಎಂದು ಬಹುತೇಕ ಮಂದಿ ಅಂದುಕೊಂಡೇ ಇರಲಿಲ್ಲ. ಯಾವುದೇ ಕ್ಷಣದಲ್ಲಿಯೂ ಮುರಿದು ಬೀಳುತ್ತದೆ ಎಂದಿದ್ದ ಸರ್ಕಾರ ಒಂದು ವರ್ಷ ಬಾಳಿದೆ ಎಂದರೆ ಹಲವರಿಗೆ ಆಶ್ಚರ್ಯವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ.
ನಿನ್ನೆ ಕೂಡ ಮೈತ್ರಿಕೂಟದಲ್ಲಿ ನಾಯಕರಾದ ಸಿದ್ದರಾಮಯ್ಯ ಮತ್ತು ಎಚ್ ವಿಶ್ವನಾಥ್ ಮಧ್ಯೆ ಮಾತಿನ ಸಮರ ಮುಂದುವರಿದಿತ್ತು. ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರಿಗೆ ಕೊನೆಯ ದಿನ, ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ದವಾಗುತ್ತಿದೆ, ಅದು ಶೇಕಡಾ 100ರಷ್ಟು ಸತ್ಯ ಎಂದು ಬಿಜೆಪಿ ನಾಯಕ ಡಿ ವಿ ಸದಾನಂದ ಗೌಡ ಹೇಳಿದ್ದರು.
ನಿಜವಾಗಿ ಹೇಳಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯಾಗಿ ಹಲವು ಉನ್ನತ ಮಟ್ಟದ ಬಿಜೆಪಿ ನಾಯಕರು ಮೇ 23ರ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಯಾಗಲಿದೆ ಎಂದು ಹೇಳಿದ್ದರು. ಮೈತ್ರಿ ಸರ್ಕಾರವನ್ನು ಸರಿಯಾಗಿ ಆಡಳಿತ ನಡೆಸಲು ಬಿಡದಂತೆ ಬಿಜೆಪಿ ಹಲವು ತಂತ್ರಗಳನ್ನು ಹೆಣೆಯುತ್ತಿದೆ. ಇನ್ನೊಂದೆಡೆ ಬಿಜೆಪಿಯೇತರ ಸ್ಥಳೀಯ ಪಕ್ಷಗಳ ಮೈತ್ರಿಯೊಂದಿಗೆ ಮೈತ್ರಿ ಸರ್ಕಾರ ರಚನೆಗೆ ಕರ್ನಾಟಕ ರಾಜ್ಯವನ್ನು ಮಾದರಿಯಾಗಿ ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.