ರಾಜಕೀಯ

ಕಾಂಗ್ರೆಸ್‍ ತೊರೆಯುವುದಿಲ್ಲ, ಮಂತ್ರಿ ಸ್ಥಾನದ ಆಸೆ ಇಲ್ಲ: ಮಹೇಶ್ ಕುಮಟಳ್ಳಿ ಸ್ಪಷ್ಟನೆ

Vishwanath S
ಬೆಂಗಳೂರು: ಆಪರೇಷನ್ ಕಮಲದ ಬಗ್ಗೆ ನನಗೇನೂ ಗೊತ್ತಿಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದು ವೇಳೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಇದ್ದರೆ ಅವುಗಳನ್ನು ಪಕ್ಷದೊಳಗೆ ಸರಿಪಡಿಸಿಕೊಳ್ಳುತ್ತೇವೆ. ಬೇರೆ ಯಾವ ಪಕ್ಷಕ್ಕೂ ನಾನು ಹೋಗುವುದಿಲ್ಲ. ಕಾಂಗ್ರೆಸ್‍ ತೊರೆಯುವುದಿಲ್ಲ ಎಂದು ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ನೀರು ಸಂಬಂಧ ಸರ್ಕಾರದಿಂದ ಕೆಲಸಗಳು ಆಗಬೇಕಿವೆ. ಹೀಗಾಗಿ ಬೆಂಗಳೂರಿಗೆ ಬಂದು ಮೂರು ದಿನಗಳಾದವು. ನಾನು ಕ್ಷೇತ್ರದಲ್ಲಿ ಇಲ್ಲದ್ದನ್ನು ನೋಡಿ ಗೋವಾಗೆ ಹೋಗಿದ್ದೇನೆ ಎಂದು ಸುದ್ದಿ ಹರಡಲಾಗಿದೆ. ಆದರೆ ನಾನು ಎಲ್ಲಿಯೂ ಹೋಗಿರಲಿಲ್ಲ ಎಂದು ಸಮರ್ಥಿಸಿಕೊಂಡರು.
ರಮೇಶ್ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿದ್ದೀರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹೇಶ್ ಕುಮಟಳ್ಳಿ, ಹೌದು, ನನ್ನನ್ನು ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ಶಾಸಕರೂ ಅವರ ಜೊತೆಯಲ್ಲಿಯೇ ಇರುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ, ಸಚಿವ ಸ್ಥಾನಕ್ಕೂ ಆಕಾಂಕ್ಷಿಯಲ್ಲ. ಅಭಿವೃದ್ಧಿ ರಾಜಕಾರಣದಲ್ಲಿ ನಂಬಿಕೆ ಇರುವ ವ್ಯಕ್ತಿ ಎಂದು ಸಂಪುಟ ಪುನಾರಚನೆಯಲ್ಲಿ ತಮಗೆ ಅವಕಾಶ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಅವರು ಈ ರೀತಿ ಉತ್ತರಿಸಿದರು.
SCROLL FOR NEXT