ಬೆಳಗಾವಿ: ಡಿಸೆಂಬರ್ 5ರಂದು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕೆಲವು ಅನರ್ಹ ಶಾಸಕರನ್ನು ಸ್ಪರ್ಧೆಗಿಳಿಸುವ ಬಿಜೆಪಿಯ ಯೋಜನೆ ಆಂತರಿಕ ಭಿನ್ನಮತದಿಂದ ಅಡ್ಡಿಯುಂಟುಮಾಡಿದರೆ ಇನ್ನೊಂದು ಕಡೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಗೊಂದಲದಲ್ಲಿದೆ. ಕಾಗವಾಡ, ಗೋಕಾಕ್ ಮತ್ತು ಅಥಣಿ ಕ್ಷೇತ್ರಗಳಲ್ಲಿರುವ ರಾಜಕೀಯ ಅನಿಶ್ಚಿತತೆಯಿಂದಾಗಿ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.
ಕಾಂಗ್ರೆಸ್ ಈಗಾಗಲೇ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಉಳಿದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯನ್ನು ಸ್ಥಳೀಯ ನಾಯಕರ ಒತ್ತಡದಿಂದಾಗಿ ಸದ್ಯಕ್ಕೆ ತಡೆಹಿಡಿದಿದೆ. ತಮ್ಮ ಕಿರಿಯ ಸೋದರ ಲಕ್ಕನ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದ ಅಭ್ಯರ್ಥಿ ಎಂದು ಬೆಳಗಾವಿಯಲ್ಲಿ ಜಾರಕಿಹೊಳಿ ಸೋದರರು ಪ್ರಚಾರ ಆರಂಭಿಸಿದ್ದರೂ ಕೂಡ ಜಾರಕಿಹೊಳಿಯವರನ್ನು ಕಣಕ್ಕಿಳಿಸಬಾರದು ಎಂದು ಕೆಲ ನಾಯಕರ ವಿರೋಧದಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಒಪ್ಪಿಗೆ ಕೊಟ್ಟಿಲ್ಲ.
ಕಾಗವಾಡದಲ್ಲಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ಉತ್ಸುಕರಾಗಿದ್ದರೂ ಕೂಡ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಗೊಂದಲದಲ್ಲಿದೆ.
ಅಥಣಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅಥವಾ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಕಣಕ್ಕಿಳಿಸುವುದೋ ಎಂಬ ಗೊಂದಲದಲ್ಲಿ ಬಿಜೆಪಿಯಿರುವುದರಿಂದ ಕಾಂಗ್ರೆಸ್ ನಿಂದಲೂ ಅಭ್ಯರ್ಥಿ ಘೋಷಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.