ರಾಜಕೀಯ

ಅನರ್ಹ ಶಾಸಕರು ಬಾಯಿಬಿಟ್ಟರೆ ಬಾಂಬ್ ಸ್ಫೋಟಗೊಳ್ಳುತ್ತದೆ: ಸಿ.ಟಿ.ರವಿ

Manjula VN

ಬೆಂಗಳೂರು: ಅನರ್ಹ ಶಾಸಕರು ಬಾಯಿ ಬಿಟ್ಟರೆ ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ಅವರು ವಾಗ್ದಾಳಿ ನಡೆಸಿದ್ದಾರೆ. 

ಸಿಎಂ ಯಡಿಯೂರಪ್ಪ ಹಾಗೂ ಅಮಿತ್ ಶಾ ಆಡಿಯೋ ಲೀಕ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅನರ್ಹ ಶಾಸಕರು ಮಾತನಾಡುತ್ತಿಲ್ಲ. ಒಂದೇ ವೇಳೆ ಅವರು ಬಾಯಿ ಬಿಟ್ಟರೆ, ಬಾಂಬ್ ಸ್ಫೋಟಗೊಳ್ಳುತ್ತದೆ. 14 ತಿಂಗಳ ಮೈತ್ರಿ ಸರ್ಕಾರ ಕುಸಿತು ಬೀಳಲು ಕಾರಣ, ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು? ಎಷ್ಟು ಬಾರಿ ಸಭೆಯಾಗಿದೆ ಎಂಬುದೆಲ್ಲಾ ಹೊರಗೆ ಬರುತ್ತವೆ ಎಂದು ಹೇಳಿದ್ದಾರೆ. 

ಸಿಟಿ. ರವಿ ಅವರ ಈ ಹೇಳಿಕೆ ಕುರಿತಂತೆ ಕಾಂಗ್ರೆಸ್ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಯಡಿಯೂರಪ್ಪ ಅವರೇ ಮಾತನಾಡಿದ್ದಾರೆನ್ನಲಾಗುತ್ತಿರುವ ಎರಡೇ ಆಡಿಯೋ ಬಿಜೆಪಿಯಲ್ಲಿರುವವರೇ ಲೀಕ್ ಮಾಡಿದ್ದು, ಇದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತಿದೆ. 

ಎಂಟಿಬಿ ನಾಗರಾಜ್ ಅವರೂ ಕೂಡ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಕೆಲವೊಮ್ಮೆ ಸಿದ್ದರಾಮಯ್ಯ ಅವರೂ ಕೂಡ ಇದನ್ನು ಒಪ್ಪಿಕೊಂಡಿದ್ದರು. ತಾವೇ ಸ್ವತಃ ವರ್ಗಾವಣೆಗೆ ಶಿಫಾರಸು ಮಾಡಿದ್ದರು, ಅದನ್ನು ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಒಪ್ಪಿರಲಿಲ್ಲ. ಈ ಸತ್ಯವನ್ನು ಸಿದ್ದರಾಮಯ್ಯ ಅಲ್ಲಗೆಳೆಯಲಿ ನೋಡೋಣ ಎಂದಿದ್ದಾರೆ. 

ಹಿಂದೆ ಒಮ್ಮೆ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡುವಂತೆ ನಾನು ಶಿಫಾರಸು ಮಾಡಿದ್ದೆ. ಆದರೆ ಅದು ಯಶಸ್ವಿಯಾಗಿರಲಿಲ್ಲ. ಇದನ್ನು ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನೇ ಶಿಫಾರಸು ಮಾಡಿದರು ಕುಮಾರಸ್ವಾಮಿ ಒಪ್ಪುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದರು. ಶಾಸಕರಿಗೆ ಕಾಂಗ್ರೆಸ್ ನಲ್ಲಿ ಗೌರವವಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT