ರಾಜಕೀಯ

ಆಡಿಯೋ ಲೀಕ್ ಅಸ್ತ್ರ ಹಿಡಿದ ವಿಪಕ್ಷಗಳು: ಜಗ್ಗದ ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಮೈತ್ರಿ ಸರ್ಕಾರ ಕುಸಿದು ಬೀಳುವಲ್ಲಿ ಕೇಂದ್ರೀಯ ನಾಯಕತ್ವದ ಕೈವಾಡವಿದೆ ಎಂದು ಹೇಳಲಾಗುತ್ತಿರುವ ಕುರಿತ ಆಡಿಯೋ ಲೀಕ್'ನ್ನೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಸ್ತ್ರವಾಗಿಸಿಕೊಂಡು ಹರಿಹಾಯುತ್ತಿದ್ದು, ಇದಾವುದಕ್ಕೂ ಜಗ್ಗದ ಬಿಜೆಪಿ ಆರೋಪಗಳನ್ನು ಅಲ್ಲಗೆಳೆಯುತ್ತಿದೆ. 

ಆಡಿಯೋ ಲೀಕ್"ನ್ನು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಪ್ರಯೋಗಿಸಲು ಕಾಂಗ್ರೆಸ್ ಯತ್ನ ನಡೆಸುತ್ತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಇಂದು ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ, ಪ್ರಕರಣ ಹಿಡಿದು ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. 

ಈ ನಡುವೆ ಮಾತನಾಡಿರುವ ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು, ಕೇಂದ್ರ ಸರ್ಕಾರದ ಆಣತಿಯಂತೆ ಉತ್ತರಾಖಂಡ ಮುಖ್ಯಮಂತ್ರಿ ವಿರುದ್ಧ ಶಾಸಕರ ಕುದುರೆ ವ್ಯಾಪಾರ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿತ್ತು. ಅದೇ ಮಾನದಂಡವನ್ನು ಕರ್ನಾಟಕದಲ್ಲೂ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದೇ ಮಾನದಂಡ ಅನುಸರಿಸುವುದು ವಿವೇಕಯುತ ಕ್ರಮವಾಗುತ್ತದೆ. ಆದರೆ, ಈ ಬಗ್ಗೆ ಕೇಂದ್ರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿರುವುದೇ ಕೆಟ್ಟ ನಡವಳಿಕೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಜೆಡಿಎಸ್ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ. 

ಯಡಿಯೂರಪ್ಪ, ಶಾ ಅವರು ನೀಡಿರುವ ಹೇಳಿಕೆ ಆಡಿಯೋ ವೈರಲ್ ವಿಚಾರ ಪ್ರಧಾನಿ ಹಾಗೂ ಅಮಿತ್ ಶಾ ಅವರಿಗೂ ಗೊತ್ತಿದೆ. ರಾಜ್ಯ ಕಾಂಗ್ರೆಸ್ ನವರು ರಾಜ್ಯಪಾಲರು ಮತ್ತು ರಾಷ್ಟ್ರಪತಿ ಅವರಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಅನರ್ಹ ಶಾಸಕರ ಕುರಿತು ಸೋಮವಾರ ಸುಪ್ರೀಂಕೋರ್ಟ್'ನಲ್ಲಿ ತೀರ್ಪು ಬರುವ ನಿರೀಕ್ಷೆ ಇದ್ದು, ಈ ತೀರ್ಪು ನೋಡಿ ಜೆಡಿಎಸ್ ಮುಂದಿನ ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ದಾರೆ. 

SCROLL FOR NEXT