ರಾಜಕೀಯ

ಉಪಚುನಾವಣೆಗೆ ಬಿಎಸ್'ವೈ ಸಿದ್ಧತೆ: ಅನರ್ಹ ಶಾಸಕರ ಕ್ಷೇತ್ರಗಳಿಗೆ ಭಾರೀ ಮೊತ್ತದ ಅನುದಾನ ಬಿಡುಗಡೆ

Manjula VN

ಬೆಂಗಳೂರು: ಸಾಕಷ್ಟು ಏಳುಬೀಳುಗಳ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸರ್ಕಾರ ಉಳಿಸಲು ಶತಾಯಗತಾಯ ಯತ್ನಗಳನ್ನು ನಡೆಸುತ್ತಿದ್ದು, ಉಪಚುನಾವಣೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 

ಡಿಸೆಂಬರ್ 5 ರಂದು ನಡೆಯಲಿರುವ ಉಪಚುನಾವಣಾ ಸಮರವನ್ನು ಗಂಭೀರವಾಗಿ ಪರಿಗಣಿಸಿರುವ ಯಡಿಯೂರಪ್ಪ ಅವರು, ಮೈತ್ರಿ ಸರ್ಕಾರ ಬೀಳಿಸಲು ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಭಾರೀ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. 

ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನುಗೊಂಡನಹಳ್ಳಿ ಮತ್ತು ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯ 30 ಕೆರೆಗಳಿಗೆ ಕೆ.ಆರ್.ಪುರಂ ಎಸ್'ಟಿಪಿಯಿಂದ ನೀರು ತುಂಬಿಸುವ ಸುಮಾರು ರೂ.100 ಕೋಟಿ ವೆಚ್ಚತ ಏತ ನೀರಾವರಿ ಯೋಜನೆ ಕಾಮಗಾರಿಗೆ ನಿನ್ನೆಯಷ್ಟೇ ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. 

ಈ ಬಾರಿಯ ಉಪ ಚುನಾವಣೆ ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಲಿದ್ದು, ಚುನಾವಣೆಯಲ್ಲಿ ಗೆಲ್ಲಲೇ ಬೇಕಾಗಿದೆ. ಚುನಾವಣಾ ಗೆಲುವು ಕೇವಲ ಯಡಿಯೂರಪ್ಪ ಅವರ ಪ್ರತಿಷ್ಠೆಗಷ್ಟೇ ಸಂಬಂಧಿಸಿದ್ದಲ್ಲ, ಸರ್ಕಾರದ ಅಳಿವು-ಉಳಿವಿಗೆ ಸಂಬಂಧಿಸಿದ್ದಾಗಿದೆ. ಅನರ್ಹ ಶಾಸಕರ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ತಡೆಹಿಡಿದಿದ್ದು, ಉಪ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಯಡಿಯೂರಪ್ಪ ಅವರು, ಅನರ್ಹ ಶಾಸಕರ ಕ್ಷೇತ್ರಗಳತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ, ಈ ಕ್ಷೇತ್ರಗಳ ಅಭಿವೃದ್ಧಿಗೆ ಭಾರೀ ಮೊತ್ತದ ಅನುದಾನವನ್ನು ಘೋಷಣೆ ಮಾಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಇತ್ತೀಚೆಗಷ್ಟೇ ಕೋರ್ ಕಮಿಟಿ ಸಭೆ ಕರೆದಿದ್ದ ಯಡಿಯೂರಪ್ಪ ಅವರು ಉಪಚುನಾವಣೆ ಸಿದ್ಧತೆ ಬಗ್ಗೆ ಮಾತುಕತೆ ನಡೆಸಿದ್ದಾರೆ. 

ಈ ನಡುವೆ ಕಾಂಗ್ರೆಸ್ 8 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ 15 ಕ್ಷೇತ್ರಗಳಿಗೂ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ್ದು, ಈ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. 
 
ಕಂದಾಯ ಸಚಿವ ಆರ್.ಅಶೋಕ್ ಜೊತೆಗೆ ಹೊಸಕೋಟೆಗೆ ನಿನ್ನೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು, ಅನರ್ಹ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಕೊಂಡಾಡಿದ್ದಾರೆ. ನಾಗರಾಜ್ ಅವರು ಏನನ್ನೇ ಕೇಳಿದರೂ ಅದನ್ನು ಕೊಡಲು, ಬಿಡುಗಡೆ ಮಾಡಲು ಸಿದ್ಧನಿದ್ದೇನೆ. ಭವಿಷ್ಯದಲ್ಲಿ ಮೆಟ್ರೋ ಸಂಚಾರ ಸಂಪರ್ಕವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ನವೆಂಬರ್ 8 ರಂದು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದ್ದು, ಈ ವೇಳೆ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ರೂ.325 ಕೋಟಿ ಅನುದಾನ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ವೈದ್ಯಕೀಯ ಕಾಲೇಜಿಗೆ ಸಚಿವ ಸಂಪುಟ ರೂ.150 ಕೋಟಿಗೆ ಒಪ್ಪಿಗೆ ನೀಡಿದೆ. 

ಈ ನಡುವೆ ಬಳ್ಳಾರಿಯ ವಿಜಯನಗರ ಕ್ಷೇತ್ರಕ್ಕೆ ರೂ.40 ಕೋಟಿಯನ್ನು ಯಡಿಯೂರಪ್ಪ ಅವರು ಬಿಡುಗಡೆ ಮಾಡಲಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ. 

ಈ ಬಗ್ಗೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಯಡಿಯೂರಪ್ಪ ಅವರು, ಈ ಹಿಂದೆಯೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿತ್ತು. ಇದೀಗ ನಾನು ಹಣವನ್ನು ಬಿಡುಗಡೆ ಮಾಡುತ್ತಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ. 

SCROLL FOR NEXT