ರಾಜಕೀಯ

'ಯಡಿಯೂರಪ್ಪ ಸಾವಿರ ಕೋಟಿ ಕೊಡುತ್ತೇನೆ ಎಂದರು ಅದಕ್ಕೆ ರಾಜಿನಾಮೆ ನೀಡಿದೆ'

Shilpa D

ಮಂಡ್ಯ: ಮೈತ್ರಿ ಸರ್ಕಾರ ಕ್ಷೇತ್ರಕ್ಕೆ ಕೊಟ್ಟ ಅನುದಾನವನ್ನೆಲ್ಲಾ ಹಾಸನಕ್ಕೆ ಕಿತ್ತಕೊಂಡು ಹೋದರು. ತಾಲೂಕಿನ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 1000 ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.

ಕೆ.ಆರ್.ಪೇಟೆಯ ಬೂಕನಕೆರೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕೆ.ಆರ್. ಪೇಟೆ ತಾಲೂಕಿನ ಅಭಿವೃದ್ಧಿಗಾಗಿ 700 ಕೋಟಿರೂ ಅನುದಾನ ಕೇಳಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾವಿರ ಕೋಟಿ ಕೊಡುತ್ತೇನೆ ಎಂದರು.

ನಮ್ಮ ತಾಲೂಕಿನ ಅಭಿವೃದ್ಧಿಗಾಗಿ ಯಡಿಯೂರಪ್ಪ ಜೊತೆ ಕೈ ಜೋಡಿಸಿದೆ ಎಂದು ನಾರಾಯಣಗೌಡ ಹೇಳುವ ಮೂಲಕ ಆಪರೇಷನ್ ಕಮಲದ ರುವಾರಿ ಯಡಿಯೂರಪ್ಪ ಎಂದು ತಿಳಿಸಿದರು

ಅನರ್ಹ ಶಾಸಕರ ಕುರಿತಾಗಿ ಬಿ ಎಸ್ ಯಡಿಯೂರಪ್ಪ ಆಡಿಯೋ ಲೀಕ್ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ನಾರಾಯಣ ಗೌಡ ಈ ಹೇಳಿಕೆ ಕುತೂಹಲ ಕೆರಳಿಸಿದೆ. ಮಂಡ್ಯದ ಬೂಕನಕೆರೆಯಲ್ಲಿ ಮಾತನಾಡಿದ ಅವರು, ಒಂದು ದಿನ ಸಂಜೆ ನನ್ನನ್ನು ಕೆಲವರು ಬಿಎಸ್ ಯಡಿಯೂರಪ್ಪ ಮನೆಗೆ ಕರೆದುಕೊಂಡು ಹೋದರು. ಈ ವೇಳೆ ಮಾತನಾಡಿದ ಬಿಎಸ್‌ವೈ, ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ. ನೀನು ಕೈ ಜೋಡಿಸಿದರೆ ತಾಲೂಕಿನ ಅಭಿವೃದ್ದಿ ಮಾಡೋಣ ಎಂದರು. 

ಬಿಎಸ್‌ವೈ ನೀಡಿದ ಭರವಸೆಯಂತೆ ಇದೀಗ 221 ಕೋಟಿ ಅನುದಾನ ಬಂದಿದೆ. ಹಂತ ಹಂತವಾಗಿ ಮತ್ತಷ್ಟು ಅನುದಾನ ಕ್ಷೇತ್ರಕ್ಕೆ ಬರುತ್ತದೆ ಎಂದರು. ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉಲ್ಟಾ ಹೊಡೆದಿರುವ ಅನರ್ಹ ಶಾಸಕ ನಾರಾಯಣ ಗೌಡ, ಅನುದಾನದ ಮಾತುಕತೆ ರಾಜೀನಾಮೆಗೆ ಮುನ್ನ ನಡೆದಿದ್ದಲ್ಲ ಬದಲಾಗಿ ರಾಜೀನಾಮೆ ಬಳಿಕ ಮಾತುಕತೆ ನಡೆಸಿರುವುದಾಗಿ ಸಮರ್ಥನೆ ನೀಡಿದ್ದಾರೆ. 

SCROLL FOR NEXT