ರಾಜಕೀಯ

ಆರ್ ಶಂಕರ್ ರನ್ನು ಪರಿಷತ್ ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡುತ್ತೇವೆ: ಸಿಎಂ ಯಡಿಯೂರಪ್ಪ

Lingaraj Badiger

ಬೆಂಗಳೂರು: ಅನರ್ಹಗೊಂಡು ಹೊಸದಾಗಿ ಬಿಜೆಪಿಗೆ ಸೇರಿರುವ ಶಾಸಕರಲ್ಲಿ ಒಬ್ಬರಾದ ಆರ್ ಶಂಕರ್ ಅವರು ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಗುತ್ತಲ್ ಅವರ ವಿಜಯಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ಸಿಎಂ, 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಶಂಕರ್ ಅವರೊಂದಿಗೆ ಮಾತನಾಡಿದ್ದು, ಬಿಜೆಪಿ ಅಭ್ಯರ್ಥಿಯ ವಿಜಯಕ್ಕಾಗಿ ಮನಸಾರೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ನಂತರ ಸಚಿವರನ್ನಾಗಿ ನೇಮಕ ಮಾಡುವುದಾಗಿ ಹೇಳಿದ್ದು, ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ ಎಂದರು.

ಬಿಜೆಪಿ ಅರುಣ್ ಕುಮಾರ್ ಗುತ್ತಲ್ ಅವರನ್ನು ರಾಣೆಬೆನ್ನೂರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಮತ್ತು ಶಂಕರ್ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾಯ, ವಾಚ, ಮನಸ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಬೇರೆಯವರ ಪಾಲಾಗುತ್ತಿದ್ದಂತೆ ಶಂಕರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಅವರ ಜೊತೆ ಮಾತುಕತೆ ನಡೆಸಿ, ಸಚಿವ ಸ್ಥಾನ ನೀಡುವ ಭರವಸೆ ನೀಡಿದರು. ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಶಂಕರ್, ಯಡಿಯೂರಪ್ಪ ಅವರು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

SCROLL FOR NEXT