ರಾಜಕೀಯ

ಕಾಂಗ್ರೆಸ್ ತೊರೆದ ಬಳಿಕ ಎಂಟಿಬಿ ನಾಗರಾಜ್ ಸಂಪತ್ತಿನಲ್ಲಿ ಭಾರೀ ಏರಿಕೆ: ಕುದಿಯುತ್ತಿರುವ ಪ್ರತಿಪಕ್ಷಗಳು!

Nagaraja AB

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್  ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ತೊರೆದ ನಂತರ ಅವರ ಒಟ್ಟಾರೇ ಆಸ್ತಿ ಮೌಲ್ಯದಲ್ಲಿ 185 ಕೋಟಿ ರೂ. ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದು, ಹಲವರನ್ನು ಹುಬ್ಬೆರಿಸಿದೆ. 

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಎಂಟಿಬಿ ನಾಗರಾಜ್ ಪಾತ್ರವೂ ಗಣನೀಯವಾಗಿತ್ತು. ಸರ್ಕಾರ ಪತನಕ್ಕೂ ಮುನ್ನ ಪಕ್ಷ ತೊರೆಯಲ್ಲ ಅಂತಾ ಕಾಂಗ್ರೆಸ್ ನಾಯಕರಿಗೆ ಭರವಸೆ ನೀಡುತ್ತಾ ಬಂದಿದ್ದ ಎಂಟಿಬಿ, ಕೊನೆಗೆ ಮುಂಬೈನಲ್ಲಿದ್ದ ಬಂಡಾಯ ಶಾಸಕರನ್ನು ಸೇರಿಕೊಂಡಿದ್ದರು. 

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್ ಘೋಷಿಸಿಕೊಂಡಿರುವ ಆಸ್ತಿಮೌಲ್ಯ ಹೊಸ ವಿವಾದಕ್ಕೆ ಕಾರಣವಾಗಿದೆ. 2018ರ ಚುನಾವಣೆಗೂ ಮುಂಚೆ ಅವರ ಆಸ್ತಿಮೌಲ್ಯ 1 ಸಾವಿರದ 015 ಕೋಟಿ ಎಂದು ಘೋಷಿಸಿಕೊಂಡಿದ್ದರು. ಆದರೆ, ಜುಲೈ ತಿಂಗಳಲ್ಲಿ ರಾಜೀನಾಮೆ ನೀಡಿದ ನಂತರ  ಅವರ ಒಟ್ಟಾರೇ ಆಸ್ತಿ ಮೌಲ್ಯ 1, 200 ಕೋಟಿಗೆ ಏರಿಕೆ ಆಗಿದೆ. 1 ಸಾವಿರ ಕೋಟಿ ರೂಪಾಯಿ ಅದೇ ತಿಂಗಳಲ್ಲಿ ಅವರ ಖಾತೆಗೆ ಜಮೆ ಆಗಿದೆ. 

ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನರ್ಹ ಶಾಸಕ ಎಂಟಿಬಿ ಖಾತೆಯಲ್ಲಿ ಭಾರೀ ಪ್ರಮಾಣದ ಏರಿಕೆ ಆಗಿದೆ. ಬಿಜೆಪಿ ನಾಯಕರು ವೊಡ್ಡಿರುವ ಆಮಿಷಗಳ ಬಗ್ಗೆ ಅನೇಕ ಆಡಿಯೋ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಆದಾಗ್ಯೂ ಯಾವುದೇ ತನಿಖೆ ನಡೆಯುತ್ತಿಲ್ಲ . ಐಟಿ ಮತ್ತು ಇಡಿ ಏತಕ್ಕಾಗಿ ಸುಮ್ಮನೆ ಕುಳಿತಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಐಟಿ ಹಾಗೂ ಇಡಿ ಬಿಜೆಪಿ ನಿಯಂತ್ರಣದಲ್ಲಿರುವುದರಿಂದ ಎಂಟಿಬಿ ನಾಗರಾಜ್ ವ್ಯವಹಾರದ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇವುಗಳು ಬಿಜೆಪಿಯ ಇಲಾಖೆಗಳಾಗಿರುವುದರಿಂದ ಬಿಜೆಪಿ ಜೊತೆಗಿರುವ ಯಾವುದೇ ನಾಯಕರ ಬಗ್ಗೆ ಮಾತನಾಡುತ್ತಿಲ್ಲ . ಬಿಜೆಪಿ ಶಾಸಕರು ಅಥವಾ ಅವರ ಬೆಂಬಲಿಗರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಆಪರೇಷನ್ ಕಮಲದಿಂದಾಗಿ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಆದಾಗ್ಯೂ, ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ. ಎಂಟಿಬಿ ರಿಯಲ್ ಎಸ್ಟೇಟ್ ಮಾಲೀಕ, ಬಿಲ್ಡರ್ ಹಾಗೂ ಉದ್ಯಮಿಯಾಗಿದ್ದಾರೆ. ಒಂದು ವಾರದ ಹಿಂದಷ್ಟೇ ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಅವರು ದುಡ್ಡು ಮಾಡಿಲ್ಲ. ಇದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

SCROLL FOR NEXT