ರಾಜಕೀಯ

ಮಾರ್ವಾಡಿಗೆ ಬಿಬಿಎಂಪಿ ಮೇಯರ್ ಪಟ್ಟ: ಬಿಜೆಪಿ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ

Lingaraj Badiger

ಬೆಂಗಳೂರು: ಬೆಂಗಳೂರು ನಗರದ ಮೇಯರ್ ಹುದ್ದೆಗೆ ಮಾರ್ವಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಬಿಜೆಪಿ ಕ್ರಮವನ್ನು ವಿರೋಧಿಸಿ ಕರ್ನಾಟಕ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಂಗಳವಾರ ಪ್ರತಿಭಟನೆ ನಡೆಸಿದರು.
  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿ, ನೂತನ ಮೇಯರ್ ಗೌತಮ್ ವಿರುದ್ಧ ಘೋಷಣೆ ಕೂಗಿದ ಅವರು, ಬೆಂಗಳೂರು ನಗರ ಮಾರ್ವಾಡಿಗರ ಪಾಲಾಗಿರುವುದು ದುರದೃಷ್ಟಕರ ಎಂದರು. 
  
ಬೆಂಗಳೂರಿನ ಮೇಯರ್ ಸ್ಥಾನವನ್ನು ಅಚ್ಚ ಕನ್ನಡಿಗನಿಗೆ ನೀಡಬೇಕು. ಆದರೆ, ಇಲ್ಲಿ ಮಾರ್ವಾಡಿಗರು, ತೆಲುಗರು, ತಮಿಳರು, ಮಲೆಯಾಳಿಗಳ ಹಾವಳಿ ಜಾಸ್ತಿಯಾಗಿದೆ. ಇದರಿಂದ ಕೇವಲ ಬೆಂಗಳೂರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಾನಿಯಾಗುತ್ತದೆ. ಬೇರೆಡೆಯಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರಿಗೆ ಮಣೆ ಹಾಕುವ ಬದಲಿಗೆ, ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
  
ಇನ್ನೊಂದೆಡೆ, ಮಾರ್ವಾಡಿಗರನ್ನು ಆಯ್ಕೆ ಮಾಡಿರುವುದರಿಂದ ಇತರ ಜಾತಿಯವರಿಗೆ ಅನ್ಯಾಯವಾಗಿದೆ ಎಂಬ ಕೂಗು ಕೂಡ ಕೇಳಿಬಂದಿತ್ತು. 
ಆದರೆ, ಆರೋಪಗಳಿಗೆ  ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಎಲ್ಲದರಲ್ಲೂ ಹುಳುಕು ಹುಡುಕಬೇಡಿ. ಗೌತಮ್ ಕನ್ನಡಿಗರಲ್ಲ ಎಂದು ಹೇಳುವುದು ಸರಿಯಲ್ಲ. ಅವರನ್ನು ಬಹುಮತದಿಂದ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ. ಗೌಡರಿಗೆ ಅನ್ಯಾಯವಾಗಿದೆ, ಲಿಂಗಾಯತರಿಗೆ ಮೋಸವಾಗಿದೆ ಎಂದೆಲ್ಲ ಹೇಳುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

SCROLL FOR NEXT