ರಾಜಕೀಯ

ಬಿಜೆಪಿ ಅತೃಪ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಅನರ್ಹ ಶಾಸಕರ ಹಾದಿ ಸುಗಮಗೊಳಿಸಿದ ಸಿಎಂ

Lingaraj Badiger

ಬೆಂಗಳೂರು: ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಹಾದಿ ಸುಗಮಗೊಳಿಸುವುದಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಅನರ್ಹ ಶಾಸಕರು ಪ್ರತಿನಿಧಿಸುವ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅತೃಪ್ತ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಈ ಮೂಲಕ ಪಕ್ಷದೊಳಗೆ ಎದ್ದಿರುವ ಅಸಮಾಧಾನ ಶಮನಗೊಳಿಸಲು ಯತ್ನಿಸಿದ್ದಾರೆ.

ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಬಂಡಾಯ ಏಳುವ ಸೂಚನೆ ನೀಡಿದ್ದ ಎಂಟು ನಾಯಕರನ್ನು ವಿವಿಧ ನಿಗಮ - ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಹೊಸಕೋಟೆ, ಹಿರೇಕೆರೂರು, ಕೆಆರ್ ಪುರಂ, ಹೊಸಪೇಟೆ, ಕಾಗವಾಡ, ಮಸ್ಕಿ, ಗೋಕಾಕ್ ಮತ್ತು ಯಲ್ಲಾಪುರದಲ್ಲಿ ಅಸಮಾಧಾನಗೊಂಡಿದ್ದ ಸ್ಥಳೀಯ ಬಿಜೆಪಿ ನಾಯಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಹೊಸಕೋಟೆಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಶರತ್ ಬಚ್ಚೇಗೌಡ ಅವರಿಗೆ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಸ್ಥಾನ, ಬೆಳಗಾವಿಯ ಗೋಕಾಕ್​ನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಅಶೋಕ್ ಪೂಜಾರಿ ಅವರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ದಯಪಾಲಿಸಲಾಗಿದೆ. ಇದೇ ಜಿಲ್ಲೆಯ ಕಾಗವಾಡದಲ್ಲಿ ತೀವ್ರತರದಲ್ಲೇ ಅತೃಪ್ತಿ ವ್ಯಕ್ತಪಡಿಸಿದ್ದ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಮಲಪ್ರಭ-ಘಟಪ್ರಭಾ ಯೋಜನೆಯ ಅಧ್ಯಕ್ಷ ಸ್ಥಾನವನ್ನು ನೀಡಿ ಸಮಾಧಾನಿಸಲು ಯತ್ನಿಸಲಾಗಿದೆ.

ಇನ್ನು ಕೆಆರ್ ಪುರಂನಲ್ಲಿ ಅನರ್ಹ ಶಾಸಕ ಭೈರತಿ ಬಸವರಾಜು ಅವರ ಕಟ್ಟಾ ವಿರೋಧಿ ಎನಿಸಿರುವ ಬಿಜೆಪಿಯ ನಂದೀಶ್ ರೆಡ್ಡಿ ಅವರಿಗೆ ಮಹತ್ವದ ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಇನ್ನು, ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರ ಹಾದಿಯನ್ನು ಸುಗಮಗೊಳಿಸಲು ಗವಿಯಪ್ಪ ಅವರಿಗೆ ಒಂದು ನಿಗಮ ಮಂಡಳಿ ಸ್ಥಾನ ಕೊಡಲಾಗಿದೆ. ಗವಿಯಪ್ಪ ಅವರು ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಲು ಬಲವಾಗಿ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮಂಡಳಿ ಸ್ಥಾನ ನೀಡಲಾಗಿದೆ.

ನಿಗಮ-ಮಂಡಳಿ ಹಾಗೂ ಅಧ್ಯಕ್ಷರ ಪಟ್ಟಿ
1) ಅಶೋಕ್ ಪೂಜಾರಿ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು – ಗೋಕಾಕ್, ಬೆಳಗಾವಿ
2) ರಾಜು ಕಾಗೆ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ – ಕಾಗವಾಡ, ಬೆಳಗಾವಿ
3) ಯು.ಬಿ. ಬಣಕಾರ್: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ – ಹಿರೇಕೆರೂರು, ಹಾವೇರಿ ಜಿಲ್ಲೆ
4) ಬಸನಗೌಡ ತುರವಿಹಾಳ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ತುಂಗ ಭದ್ರ ಯೋಜನೆ) – ಮಸ್ಕಿ, ರಾಯಚೂರು
5) ವಿಎಸ್ ಪಾಟೀಲ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಹುಬ್ಬಳ್ಳಿ
6) ಹೆಚ್.ಆರ್. ಗವಿಯಪ್ಪ: ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು
7) ನಂದೀಶ್ ರೆಡ್ಡಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ಬೆಂಗಳೂರು
8) ಶರತ್ ಬಚ್ಚೇಗೌಡ: ಕರ್ನಾಟಕ ಗೃಹ ಮಂಡಳಿ - ಬೆಂಗಳೂರು

SCROLL FOR NEXT