ರಾಜಕೀಯ

ಪ್ರಭಾಕರ್ ಕೋರೆ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಗೋವಿಂದ ಕಾರಜೋಳ 

Sumana Upadhyaya

ಕಲಬುರಗಿ: ಸದ್ಯದಲ್ಲಿಯೇ ಹಿರಿಯ ಶಾಸಕ ಉಮೇಶ್ ಕತ್ತಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆಯವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.


ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕಲಬುರಗಿಗೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಅವರಲ್ಲಿ ಕೇಳಿದ ಪ್ರಶ್ನೆ ಆಧರಿಸಿ ಈ ಹೇಳಿಕೆ ನೀಡಿರಬಹುದು. ಯಾರಿಗೆ ಜವಾಬ್ದಾರಿ ಕೊಡಬೇಕು, ಯಾರಿಗೆ ಯಾವ ಹುದ್ದೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.


ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಉತ್ತರ ಕರ್ನಾಟಕ ಭಾಗದ ರೈತರು ರೊಚ್ಚಿಗೆದ್ದಿರುವ ಬಗ್ಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಮತ್ತು ತಾವು ಕೇಂದ್ರ ಸಚಿವರುಗಳನ್ನು ಮತ್ತು ಪ್ರಧಾನ ಮಂತ್ರಿಯನ್ನು ಇತ್ತೀಚೆಗೆ ಭೇಟಿ ಮಾಡಿ ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿ ಎಂದು ಮನವಿ ಮಾಡಿಕೊಂಡಿದ್ದೆವು. ಕೇಂದ್ರ ಸರ್ಕಾರ, ನದಿ ನೀರು ನ್ಯಾಯಾಧೀಕರಣ ಮತ್ತು ನ್ಯಾಯಾಲಯದಿಂದ ಸದ್ಯದಲ್ಲಿಯೇ ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.


ಉತ್ತರ ಕರ್ನಾಟಕದ ನೆರೆ ಪೀಡಿತ ಜನರ ಸಂಕಷ್ಟದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಕ್ಕೆ, ಕೇಂದ್ರ ಸರ್ಕಾರ 1,200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನೀಡಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಹಣವನ್ನು ಕೇಂದ್ರ ಬಿಡುಗಡೆ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಬೆಳೆದು ನಿಂತಿದ್ದ ಸುಮಾರು 7 ಲಕ್ಷದ 19 ಸಾವಿರ ಎಕರೆ ಬೆಳೆ ನಾಶವಾಗಿದ್ದರಿಂದ ಉಂಟಾಗಿರುವ ನಷ್ಟವನ್ನು ತುಂಬಿಸಲು ರಾಜ್ಯ ಸರ್ಕಾರ 3 ಸಾವಿರದ 800 ಕೋಟಿ ರೂಪಾಯಿ ಭರಿಸಬೇಕಾಗಿದೆ. 2.3 ಲಕ್ಷ ಮನೆಗಳು ಹಾನಿಗೀಡಾಗಿವೆ, 21 ಸಾವಿರ ಕಿಲೋ ಮೀಟರ್ ಉದ್ದದ ರಸ್ತೆ ಹಾಳಾಗಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರ 2 ಸಾವಿರದ 900 ಕೋಟಿ ರೂಪಾಯಿ ಪರಿಹಾರ ನೀಡಿದೆ ಎಂದರು.


ವಿಧಾನ ಸೌಧದೊಳಗೆ ಕಲಾಪ ವೇಳೆ ಖಾಸಗಿ ಕ್ಯಾಮರಾಮೆನ್ ಗಳು ಮತ್ತು ಛಾಯಾಚಿತ್ರಗ್ರಾಹಕರಿಗೆ ನಿಷೇಧ ಹೇರಿರುವ ಬಗ್ಗೆ ಕೇಳಿದಾಗ ಈ ವಿಚಾರವನ್ನು ಸ್ಪೀಕರ್ ಜೊತೆ ಚರ್ಚಿಸುವುದಾಗಿ ತಿಳಿಸಿದರು.

SCROLL FOR NEXT