ರಾಜಕೀಯ

ರಾಜಕಾರಣ ನಿಂತ ನೀರಲ್ಲ, ನಾನು ಹರಿಯ ನೀರಾಗಬೇಕು- ಸಿ.ಎಚ್. ವಿಜಯ್ ಶಂಕರ್ 

Nagaraja AB

ಮೈಸೂರು: ರಾಜಕಾರಣ ನಿಂತ ನೀರಲ್ಲ, ನಾನು ಹರಿಯ ನೀರಾಗಬೇಕು ಎಂದು ಹೇಳುವ ಮೂಲಕ ಮಾಜಿ ಶಾಸಕ ಸಿ.ಎಚ್. ವಿಜಯ್ ಶಂಕರ್ ಬಿಜೆಪಿ ಸೇರ್ಪಡೆಯನ್ನು ದೃಢಪಡಿಸಿದ್ದಾರೆ.

ಕಾಂಗ್ರೆಸ್  ನಿಯೋಗವನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಜೀವಂತಿಕೆಯಾಗಿರಬೇಕು.ತಟಸ್ಥವಾಗಿ ಬದುಕಲು ನನ್ನಿಂದ ಸಾಧ್ಯವಿಲ್ಲ.ನಿಂತ ನೀರಾದರೆ ವಾಸನೆ ಬಂದು ಮೂಗು ಮುಚ್ಚಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಜನರ ಮುಂದೆ ಹೋಗಬೇಕಾದರೆ ಸದಾ ಹರಿಯುವ ನೀರಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಹುಣಸೂರು ಉಪ ಚುನಾವಣೆ ದೃಷ್ಟಿಯಿಂದ ಬಿಜೆಪಿಯ ಹಿರಿಯ ಮುಖಂಡರು ಈಗಾಗಲೇ ವಿಜಯ್ ಶಂಕರ್ ಜೊತೆ ಚರ್ಚಿಸಿದ್ದು, ಸೇರ್ಪಡೆ ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಉಳಿದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಣೆ ಹಾಗೂ ಪಿರಿಯಾಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಕಡೆಗಣಿಸಿದ ಪರಿಣಾಮ ಬಿಜೆಪಿ ವಿರುದ್ಧ ಅಸಮಾಧಾನಗೊಂಡು ವಿಜಯಶಂಕರ್ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಳೆದ ವರ್ಷವಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.

ಕಾಂಗ್ರೆಸ್ ನಲ್ಲಿ ರಾಜಕೀಯವಾಗಿ ತಮಗೆ ಅವಕಾಶ ಕಡಿಮೆ ಎಂಬ ಕಾರಣದಿಂದಾಗಿ ಅನಿವಾರ್ಯವಾಗಿ ರಾಜಕೀಯದಲ್ಲಿ ಉಳಿಯಲು ವಿಜಯಶಂಕರ್ ಅವರು ಚಿಂತನೆ ನಡೆಸಿ ಮತ್ತೆ ಕಮಲ ಪಾಳಯದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

SCROLL FOR NEXT