ರಾಜಕೀಯ

ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಪಠ್ಯ ರದ್ದುಪಡಿಸಬಾರದು: ಕುಮಾರಸ್ವಾಮಿ ಒತ್ತಾಯ

Lingaraj Badiger

ಬೆಂಗಳೂರು: ಶಾಲಾ ಮಕ್ಕಳ ಪಠ್ಯ ಪುಸ್ತಕದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಧ್ಯಾಯವನ್ನು ತೆಗೆದು ಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು, ರಾಜ್ಯ ಸರ್ಕಾರ ತಪ್ಪು ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

ಇಂದು ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉದಾಸೀನತೆ ತೋರುವುದು ತರವಲ್ಲ. ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಡುತ್ತಿರುವುದು ಒಂದು ತಪ್ಪಾದರೆ, ಟಿಪ್ಪು ಕುರಿತ ಶಾಲಾ‌‌ಪಠ್ಯವನ್ನು ತೆಗೆಯುತ್ತೇನೆ ಎನ್ನುವುದು ಮತ್ತೊಂದು ತಪ್ಪು. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದರು.

ಪಕ್ಷದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿವೆ. ಹಾಗೆಂದು ಯಾವುದೇ ಶಾಸಕರು ಜೆಡಿಎಸ್ ತ್ಯಜಿಸುವುದಿಲ್ಲ ಎಂದು ಪಕ್ಷದ ಶಾಸಕಾಂಗ ಪಕ್ಷದ ನಾಯಕರೂ ಆದ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು

ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಮೊದಲ ಬಾರಿಗೆ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ರಾಜ್ಯ ಸರ್ಕಾರ ಆಚರಿಸಿತ್ತು. ಆದರೆ, ಇದನ್ನು ವಿರೋಧಿಸಿ ಬಿಜೆಪಿ ನಾಯಕರು ರಾಜ್ಯಾದ್ಯಂತ ರಸ್ತೆಗಿಳಿದು ಹೋರಾಟ ನಡೆಸಿದ್ದರು. ಅಲ್ಲದೆ, ಬಿ.ಎಸ್. ಯಡಿಯೂರಪ್ಪ ಕಳೆದ ಜುಲೈ.26ರಂದು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಟಿಪ್ಪು ಜಯಂತಿಯನ್ನು ರದ್ದು ಮಾಡುವುದಾಗಿ ಘೋಷಿಸಿದ್ದರು. ಈಗ ಟಿಪ್ಪು ಕುರಿತ ಪಠ್ಯವನ್ನು ರದ್ದು ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

SCROLL FOR NEXT