ರಾಜಕೀಯ

ದೇಶಕ್ಕಾಗಿ ಹೋರಾಡಿ ಡಿಕೆಶಿ ಜೈಲು ಸೇರಿಲ್ಲ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ

Lingaraj Badiger

ಉಡುಪಿ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಕಾನೂನು ಸಂಬಂಧಿಸಿದ ಪ್ರಕ್ರಿಯೆ. ಅದನ್ನು ಮುಂದಿಟ್ಟುಕೊಂಡು ಶಾಂತಿಯುತ ಪ್ರತಿಭಟನೆ ನಡೆಸಲು ಕಾಂಗ್ರೆಸ್​ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಸ್ವಾತಂತ್ರ್ಯವಿದೆ. ಅದನ್ನು ನಾವು ಪ್ರಶ್ನಿಸುವುದಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚುವ ಮೂಲಕ ಕಾಂಗ್ರೆಸ್​ ಕಾರ್ಯಕರ್ತರು ಅವಹೇಳನ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದು, ಈ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ ಕೆ ಶಿವಕುಮಾರ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಅನ್ಯಾಯವಾಗಿದ್ದರೆ ಸುಪ್ರೀಂ ಕೋರ್ಟ್​ಗೆ ಹೋಗಲಿ. ಡಿಕೆ ಶಿವಕುಮಾರ್ ಅವರೇನು ದೇಶಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲವಲ್ಲ. ತುರ್ತುಪರಿಸ್ಥಿತಿ ಎದುರಿಸಿ ಜೈಲಿಗೆ ಹೋಗಿಲ್ಲ ಎಂದು ಅವರು ಲೇವಡಿ ಮಾಡಿದರು.

ಪ್ರಧಾನಿ ಹಾಗೂ ಗೃಹ ಸಚಿವರಿಗೆ ಅಪಮಾನ ಮಾಡಿದರೆ ಪ್ರತಿರೋಧ ಮಾಡುವುದು ನಮಗೂ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ ಸಚಿವರು, ನಾಗರಿಕ ಸಮಾಜದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಶೋಭೆ ತರುವುದಿಲ್ಲ. ಜಗನ್ ಮೋಹನ್ ರೆಡ್ಡಿ, ಜನಾರ್ದನ ರೆಡ್ಡಿ ಬಂಧನವಾದಾಗ ಹೀಗೆಲ್ಲಾ ನಡೆದಿತ್ತಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ಹೋರಾಟ ನಡೆಸುವುದು ಹೊಸತಲ್ಲ ಎಂದು ತಿರುಗೇಟು ನೀಡಿದರು.

ನಿನ್ನೆವರೆಗೂ ನಾವು ಮೃದು ಧೋರಣೆ ಹೊಂದಿದ್ದೆವು. ಡಿಕೆ ಶಿವಕುಮಾರ್ ಮತ್ತು ಕಾನೂನು ನಡುವಿನ ವಿಚಾರವೆಂದುಕೊಂಡು ಸುಮ್ಮನಿದ್ದೆವು? ಹಾಗಾಗಿ ನಮ್ಮ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಕಟ್ಟುನಿಟ್ಟಾಗಿ ವರ್ತಿಸಲಿಲ್ಲ. ಆದರೆ ಸರ್ಕಾರಿ ಬಸ್ಸಿಗೆ ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ ನಾವು ಸಹಿಸುವುದಿಲ್ಲ ಎಂದು ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಡಿಕೆ ಶಿವಕುಮಾರ್ ಪರ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿ ಜನರಿಗೆ ತೊಂದರೆ ನೀಡಿದರೆ ರಾಜ್ಯ ಸರ್ಕಾರ ಸಹಿಸುವುದಿಲ್ಲ. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಲು ರಾಜ್ಯ ಸರ್ಕಾರ ಕಾರಣ ಅಲ್ಲ.ಅಪಮಾನಕಾರಿ ನಡವಳಿಕೆ, ಅಶ್ಲೀಲ ಪದ ಪ್ರಯೋಗ ಮಾಡಿದರೆ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್​ ಹಾಗೂ ಜೆಡಿಎಸ್ ಪಕ್ಷಗಳ ನಾಯಕರಿಗೆ ಎಚ್ಚರಿಕೆ ನೀಡಿದರು.

SCROLL FOR NEXT