ರಾಜಕೀಯ

ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡೋ ಬದಲು ಪ್ರವಾಹ ಪೀಡಿತ ಗ್ರಾಮ ದತ್ತು ಪಡೆಯಲಿ: ಸಿಟಿ ರವಿ ಸವಾಲು

Raghavendra Adiga

ಬೆಂಗಳೂರು: ಕಾಂಗ್ರೆಸ್ ಶಾಸಕರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುವ ಬದಲು ಹತ್ತು ನೆರೆ ಪೀಡಿತ ಗ್ರಾಮಗಳನ್ನು ದತ್ತು ಪಡೆದುಕೊಳ್ಳಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಶಾಸಕರಿಗೆ ಸವಾಲು ಹಾಕಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ಕಾಮಗಾರಿ ಸಮರ್ಪಕವಾಗಿ ನಡೆಸುತ್ತಿಲ್ಲ ಎನ್ನುವ ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರು, ಒಂದೊಂದು ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಿ. ಅದನ್ನು ಬಿಟ್ಟು ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೆರೆ ಪೀಡಿತ ಗ್ರಾಮಗಳ ದತ್ತು ಪಡೆದು ಸಕಾರಾತ್ಮಕ ನಿಲುವು ತಳೆಯಲಿ, ಪ್ರತಿಭಟನೆ ಮಾಡುವುದು ನಕಾರಾತ್ಮಕ ನಿಲುವಾಗಿದೆ‌ ಎಂದು ಲೇವಡಿ ಮಾಡಿದರು.

ನಮ್ಮ ಪ್ರಧಾನಿಯವರಿಗೆ ಸಣ್ಣತನವಿಲ್ಲ. ಸಣ್ಣತನ ಇದ್ದರೆ, ತಾಕತ್ತು ತೋರಿಸುತ್ತಿದ್ದರು. ಬಿಜೆಪಿಯ ಒಂದೂ ಸಂಸದರೂ ಇಲ್ಲದ ಕೇರಳಕ್ಕೂ ಪ್ರಧಾನಿ ನೆರೆ ಪರಿಹಾರವನ್ನು ನೀಡಿದ್ದಾರೆ. ತಮಿಳುನಾಡಿಗೂ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಏಕೆ ಸುಮ್ಮನೆ ಅಂದುಕೊಳ್ಳುತ್ತೀರಾ. ನೀವು ರಾಜಕಾರಣ ಮಾಡಲು ಬಯಸುತ್ತಿದ್ದೀರಿ. ಆದರೆ ಪ್ರಧಾನಿ ಅವರು ರಾಜಕಾರಣ ಮಾಡುತ್ತಿಲ್ಲ. ಅವರ ದೃಷ್ಟಿಯಲ್ಲಿ ಸಂತ್ರಸ್ತರೆಲ್ಲರೂ ಸಮಾನರು ಎಂದು ಸ್ಪಷ್ಟಪಡಿಸಿದರು.

ಗಣ್ಯರ ಜಯಂತಿಗಳ ಆಚರಣೆ ಸಂಬಂಧ ಮಾತನಾಡಿದ ಸಚಿವರು ಯಂತಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಮುಂದಿನ ದಿನಗಳಲ್ಲಿ ಸಮಾಜದ ಪ್ರಮುಖರ ಸಭೆ ಕರೆದು ಜಯಂತಿ ಆಚರಣೆಗಳ ಕುರಿತು ಚರ್ಚಿಸಲಾಗುತ್ತದೆ. ಹಾಗೆಯೇ ಜಯಂತಿ ಆಚರಣೆಗಳ ಕುರಿತು ಹೊಸ ರೂಪ ನೀಡಲು ತೀರ್ಮಾನಿಸಲಾಗುತ್ತದೆ ಎಂದರು.

ಇನ್ನು ಲಕ್ಶ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಸಮನ್ಸ್ ಕೊಟ್ಟಿರುವ ಬಗ್ಗೆ ಕೇಳಿದಾಗ "ಸಹವಾಸದಿಂದ ಸನ್ಯಾಸಿ ಕೆಟ್ಟ " ಎಂದು ಮಾರ್ಮಿಕವಾಗಿ ಉತ್ತರಿಸಿದರು.

SCROLL FOR NEXT