ರಾಜಕೀಯ

ಅಥಣಿಯಿಂದ ಲಕ್ಷ್ಮಣ್ ಸವದಿ ಸ್ಪರ್ಧಿಸುವುದಿಲ್ಲ: ರಮೇಶ್ ಜಿಗಜಿಣಗಿ 

Sumana Upadhyaya

ವಿಜಯಪುರ: ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಮೈತ್ರಿ ಸರ್ಕಾರ ಮುರಿದು ಬಿದ್ದು ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವಲ್ಲಿ ಅನರ್ಹ ಶಾಸಕರು ಅದರಲ್ಲೂ ರಮೇಶ್ ಜಾರಕಿಹೊಳಿಯವರದ್ದು ಬಹುಮುಖ್ಯ ಪಾತ್ರವಿದೆ. ಹೀಗಾಗಿ ಈ ಸಂದರ್ಭದಲ್ಲಿ ಬಿಜೆಪಿ ಕೂಡ ಕೈಕೊಟ್ಟುಬಿಟ್ಟರೆ ಅನರ್ಹ ಶಾಸಕರಿಗೆ ದ್ರೋಹ ಬಗೆದಂತೆ ಆಗುತ್ತದೆ.


ಭಾರತೀಯ ಜನತಾ ಪಕ್ಷ ಅನರ್ಹ ಶಾಸಕರ ಕೈಬಿಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳುತ್ತಾರೆ. ನಿನ್ನೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಗಜಿಣಗಿ, ರಮೇಶ್ ಜಾರಕಿಹೊಳಿಯಿಂದಾಗಿ ಬಿಜೆಪಿ ಇಂದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಪಕ್ಷ ಅವರ ಶ್ರಮವನ್ನು ಗುರುತಿಸಿ ಗೋಕಾಕ್ ನಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಿದೆ ಎನ್ನುತ್ತಾರೆ.


15 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪ ಚುನಾವಣೆ ನಡೆಸುವುದಾಗಿ ನಿನ್ನೆ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ನಿನ್ನೆಯಿಂದಲೇ ಈ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ನಲ್ಲಿದ್ದ ಮಹೇಶ್ ಕುಮಟಳ್ಳಿ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿರುವುದರಿಂದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಅಥಣಿಯಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ, ಲಕ್ಷ್ಮಣ್ ಸವದಿಗೆ ಪಾರ್ಟಿ ಹೈಕಮಾಂಡ್ ಬೇರೆಯದೇ ಯೋಜನೆ ಹಾಕಿಕೊಂಡಿದ್ದು ಅದು ಭವಿಷ್ಯದಲ್ಲಿ ಗೊತ್ತಾಗಲಿದೆ ಎನ್ನುತ್ತಾರೆ ರಮೇಶ್ ಜಿಗಜಿಣಗಿ.


ಕಾಂಗ್ರೆಸ್ ಮಾಜಿ ಗೃಹ ಸಚಿವ ಎಂಬಿ ಪಾಟೀಲ್, ಉಪ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪರ ಶೇಕಡಾ 100ರಷ್ಟು ಮತ ಹಾಕಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಅನರ್ಹ ಶಾಸಕರ ಬಗ್ಗೆ ಕ್ಷೇತ್ರದ ಜನತೆಗೆ ಸಿಟ್ಟು ಇದ್ದು ಅದನ್ನು ಉಪ ಚುನಾವಣೆಯ ಫಲಿತಾಂಶದಲ್ಲಿ ಹೊರಹಾಕಲಿದ್ದಾರೆ. ಕಾಂಗ್ರೆಸ್ ಕನಿಷ್ಠ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು. 


ನಿನ್ನೆ ಉಪ ಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಘೋಷಣೆ ಮಾಡುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸಿದ್ದತೆ ಮಾಡಿಕೊಂಡಿವೆ.

SCROLL FOR NEXT