ರಾಜಕೀಯ

ಎಲ್ಲಾ ಅನರ್ಹ ಶಾಸಕರಿಗೂ ಬಿಜೆಪಿ ಟಿಕೆಟ್: ಯಡಿಯೂರಪ್ಪ ಹೇಳಿಕೆ ಸ್ವಾಗತಿಸಿದ ಬಿ.ಸಿ. ಪಾಟೀಲ್

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಭರವಸೆ ತಮಗೆ ಸಂತಸ ತಂದಿದೆ ಎಂದು ಹಿರೆಕೇರೂರು ಅನರ್ಹ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಕಾನೂನು ಹೋರಾಟ ನಡೆಸುತ್ತಿದ್ದು, ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರ ತೀರ್ಪು ಬರುವ ವಿಶ್ವಾಸ ಇದೆ. ಬಿಜೆಪಿ ಸೇರ್ಪಡೆ ಬಗ್ಗೆ ತಾವೆಲ್ಲ ಒಟ್ಟಾಗಿ ಕೂತು ಚರ್ಚಿಸಿ ನಿರ್ಧಿಸುವುದಾಗಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ ಎಂಬ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಬಿ.ಸಿ.ಪಾಟೀಲ್, ದಿನೇಶ್ ಗುಂಡೂರಾವ್ ಅಂತವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವವರೆಗೂ ಪಕ್ಷ ಉದ್ಧಾರ ಆಗುವುದಿಲ್ಲ‌. ದಿನೇಶ್ ಗುಂಡೂರಾವ್ ಸರಿ ಇದ್ದಿದ್ದರೆ ನಾವೆಲ್ಲ ಪಕ್ಷ ಬಿಟ್ಟು ಆಚೆ ಬರುವ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ ಎಂದರು. 

ದಿನೇಶ್ ಗುಂಡೂರಾವ್ ಪಕ್ಷದ ಅಧ್ಯಕ್ಷರಾಗುವ ಮೊದಲು ರಾಜ್ಯದಲ್ಲಿ 9 ಕಾಂಗ್ರೆಸ್ ಸಂಸದರಿದ್ದರು. ಅವರು ಬಂದ ಮೇಲೆ ಒಬ್ಬ ಸಂಸದರು ಮಾತ್ರ ಆಯ್ಕೆಯಾಗಿದ್ದಾರೆ. ಅವರು ಸರಿಯಾಗಿ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ಸರಿಯಾಗಿರುತ್ತಿತ್ತು. ಪಕ್ಷದ ಅಧ್ಯಕ್ಷರಾದವರ ನಡೆ ಏಕಪಕ್ಷೀಯವಾಗಿರಬಾರದು ಎಂದು ಕುಟುಕಿದರು.

ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿ.ಸಿ. ಪಾಟೀಲ್, ಉಮೇಶ್ ಕತ್ತಿ ಯಡಿಯೂರಪ್ಪ ಬಗ್ಗೆ ಅನಗತ್ಯವಾಗಿ ಮಾತನಾಡಬಾರದಿತ್ತು. ನಮಗೆ ಟಿಕೆಟ್ ಕೊಡುವುದು ಪಕ್ಷದ ವರಿಷ್ಠರು. ವಾಸ್ತವಿಕ ಸಂಗತಿ ಅರಿತು ಕತ್ತಿ ಮಾತನಾಡಬೇಕು. ಅವರ ಹೇಳಿಕೆ ಸರಿಯಲ್ಲ ಎಂದರು.

ಇಂದು ಬೆಳಗ್ಗೆಯಷ್ಟೇ ಸಿಎಂ ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ಎಲ್ಲಾ ಅನರ್ಹ ಶಾಸಕರಿಗೂ ಬಿಜೆಪಿ ಟಿಕೆಟ್ ನೀಡಲಾಗುವುದು ಮತ್ತು ಇದಕ್ಕೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದರು.
 

SCROLL FOR NEXT