ರಾಜಕೀಯ

ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಕೀಯ ನಾಯಕತ್ವ ಮತ್ತು ಆಡಳಿತ ನಿರ್ವಹಣಾ ತರಬೇತಿಗಾಗಿ ಅಕಾಡೆಮಿ

Shilpa D

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಕೀಯ ನಾಯಕತ್ವ ಮತ್ತು ಆಡಳಿತ ನಿರ್ವಹಣಾ ತರಬೇತಿ ನೀಡಿವ ನಿಟ್ಟಿನಲ್ಲಿ ಮಂಗಳವಾರ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ  ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

ಪಕ್ಷದ ಕಾರ್ಯಕರ್ತರು ಹಾಗೂ ಯುವ ನಾಯಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರನ್ನು ಕೇಡರ್‌ ಮಾದರಿಯಲ್ಲಿ ತರಬೇತಿಗೊಳಿಸುವುದು ಈ ಸಮಿತಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸೈದ್ದಾಂತಿಕ ಹಾಗೂ ರಾಜಕೀಯ ನಾಯಕತ್ವದ ತರಬೇತಿಯನ್ನು ನೀಡಲಾಗುತ್ತಿದೆ.

ವಿವಿಧ ಜಿಲ್ಲೆಗಳ ಆಯ್ದ ಕಾರ್ಯಕರ್ತರಿಗೆ ಈ ತರಬೇತಿಯನ್ನು ನೀಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಇದರ ರೂಪುರೇಷೆಯ ಕುರಿತಾಗಿ ಚರ್ಚೆ ನಡೆಸುವ ನಿಟ್ಟಿನಲ್ಲಿ ಮಂಗಳವಾರ ಪ್ರಮುಖ ಮುಖಂಡರ ಸಭೆ ನಡೆಯಿತು.

ಬೂತ್ ಮತ್ತು ಪಂಚಾಯತ್ ಮಟ್ಟದಲ್ಲಿ ನಾಯಕತ್ವವನ್ನು ಹೊಂದಲು, ನಮ್ಮ ಇತಿಹಾಸ ಮತ್ತು ಸಿದ್ಧಾಂತವನ್ನು ಕಲಿಸಲು ಶಾಶ್ವತ ಸಂಸ್ಥೆಯನ್ನು ಸ್ಥಾಪನೆ ಮಾಡಬೇಕೆಂಬ ಆಲೋಚನೆ ಇದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್ ಅಕಾಡೆಮಿ ಸ್ಥಾಪಿಸಲು ಬೆಳಗಾವಿಯಲ್ಲಿ ಸೇವಾದಳಕ್ಕೆ ಸೇರಿದ ಕಟ್ಟಡ ಮತ್ತು ಉಡುಪಿಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಈ ಅಕಾಡೆಮಿ ಸ್ಥಾಪಿಸುವ ಗುರಿ ಹೊಂದಲಾಗಿದೆ ಹಿರಿಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲಾ ಘಟಕಗಳಿಗೂ ಈ ಅಕಾಡೆಮಿಯಲ್ಲಿ ಒಂದು ವರ್ಷದ
ತರಬೇತಿ ಕಡ್ಡಾಯ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

SCROLL FOR NEXT