ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಮುಖ್ಯಮಂತ್ರಿ ಅವರ ಕಾವೇರಿ ನಿವಾಸಕ್ಕೆ ಸಂತೋಷ್ ಭೇಟಿ ನೀಡಿದರು, ಅವರ ಜೊತೆ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕಮಾರ್ ಕೂಡ ಇದ್ದರು. ಇಬ್ಬರೂ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಿ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದರು. ಸುಮಾರು ಮುಕ್ಕಾಲು ಗಂಟೆ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ,
ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಬಿ.ಎಲ್. ಸಂತೋಷ್ ಅವರು ನಿನ್ನೆಯಷ್ಟೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಕರೆಸಿ ಚರ್ಚೆ ನಡೆಸಿದ್ದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಗೃಹ ಸಚಿವರಿಂದ ಸಂತೋಷ್ ಮಾಹಿತಿ ಕಲೆ ಹಾಕಿದ್ದರು.