ರಾಜಕೀಯ

ಜಿಕೆವಿಕೆ, ಅರಮನೆ ಮೈದಾನ, ನ್ಯಾಯಾಂಗ ಅಕಾಡೆಮಿ: ಸ್ಪೀಕರ್ ಹೆಗಲಿಗೆ ಅಧಿವೇಶನದ ಸ್ಥಳ ನಿರ್ಧಾರದ ಹೊಣೆ!

Shilpa D

ಬೆಂಗಳೂರು: ಸೆಪ್ಟಂಬರ್ ಅಂತ್ಯದೊಳಗೆ ಪೂರ್ಣ ಪ್ರಮಾಣದ ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳುವ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ ಸೆಪ್ಟಂಬರ್ ಮುಗಿಯುವುದರೊಳಗೆ ವಿಧಾನಮಂಡಲ ಅಧಿವೇಶನ ನಡೆಸಬೇಕು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅಧಿವೇಶನವನ್ನು ಎಲ್ಲಿ ನಡೆಸಬೇಕು ಎಂಬುದು ತೀರ್ಮಾನವಾಗಿಲ್ಲ, ಹೀಗಾಗಿ ಅಧಿವೇಶನ ಎಲ್ಲಿ ನಡೆಸಬೇಕು ಎಂಬ ಬಗ್ಗೆ ತಜ್ಞರ ತಂಡದ ಜೊತೆ ಸ್ಪೀಕರ್ ಕಾಗೇರಿ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿನ ಜಿಕೆವಿಕೆ ಮೈದಾನ, ಅರಮನೆ ಮೈದಾನ ಮತ್ತು ನ್ಯಾಯಾಂಗ ಬಡಾವಣೆಗಳಲ್ಲಿ ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಪರಿಶೀಲನೆ
ನಡೆಸಿದ್ದಾರೆ.

ಜಿಕೆವಿಕೆ,ಅರಮನೆ ಮೈದಾನ ಮತ್ತು ನ್ಯಾಯಾಂಗ ಬಡಾವಣೆಯಲ್ಲಿ ಅಧಿವೇಶನ ನಡೆಸುವುದು ಸವಾಲಾಗಿದೆ, ಸದನದಲ್ಲಿ 225 ಶಾಸಕರು ಮತ್ತು 27 ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಹೆಚ್ಚಿನ ಶಾಸಕರು 55 ವರ್ಷ ಮೇಲ್ಪಟ್ಟವರಾಗಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನದ ವ್ಯವಸ್ಥೆ ಮಾಡಬೇಕಾಗಿದೆ, ಜೊತೆಗೆ ಪಾರ್ಕಿಂಗ್, ಕ್ಯಾಂಟೀನ್ ಮಾಧ್ಯಮಗಳಿಗೂ ಸಹ ಸ್ಥಳವಕಾಶ ಕಲ್ಪಿಸಿಕೊಡಬೇಕಾಗಿದೆ.  

ಮತ್ತೊಂದು ಆಯ್ಕೆ ವಿಧಾನಸೌಧದಲ್ಲಿಯೇ ಅಧಿವೇಶನನಡೆಸುವುದಾಗಿದೆ, ಎಲ್ಲಾ ಅಗತ್ಯ ಮುಂಜಾಗ್ರತಾ
ಕ್ರಮಗಳನ್ನು ಕೈಗೊಂಡು ವಿಧಾನಸೌಧದಲ್ಲೇ ಅಧಿವೇಶನ ನಡೆಸಲು ಚಿಂತಿಸಲಾಗಿದೆ. ಈ ಸಂಬಂಧ ತಜ್ಞರ ತಂಡ ಈಗಾಗಲೇ ಅರಮನೆ ಮೈದಾನ ಮತ್ತು ಜಿಕೆವಿಕೆ ಕ್ಯಾಂಪಸ್ ನಲ್ಲಿ ಪರಿಶೀಲನೆ ನಡೆಸಿ ಸ್ಪೀಕರ್ ಕಾಗೇರಿ ಅವರಿಗೆ ವರದಿ ಸಲ್ಲಿಸಿವೆ. ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಈ ಸ್ಥಳಗಳಿಗೆ ಭೇಟಿ ನೀಡಿ ಅಂತಿಮ
ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ, ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕಾಗೇರಿ ತಿಳಿಸಿದ್ದಾರೆ.

SCROLL FOR NEXT