ರಾಜಕೀಯ

ನಿಗಮ-ಮಂಡಳಿ ಹುದ್ದೆ ನನಗೆ ಬೇಡವೇ ಬೇಡ: ಸಿಎಂಗೆ ಎಂಪಿ ಕುಮಾರಸ್ವಾಮಿ ಪತ್ರ

Shilpa D

ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ಎಂಸಿಎ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮೂಡಿಗೆರೆ ಶಾಸಕರ ಎಂ.ಪಿ.ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು.  ಆ ವೇಳೆಯೇ ಕುಮಾರಸ್ವಾಮಿ ನಿಗಮ ಮಂಡಳಿ ನೀಡಿದ  ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಎಂ.ಸಿ.ಎ (ಮಾರ್ಕೆಟಿಂಗ್ ಕನ್ಸಲ್ಟಂಟ್ಸ್ ಅಥಾರಿಟಿ) ನಿಗಮ ಮಂಡಳಿ ಅಧ್ಯಕ್ಷಸ್ಥಾನ ನನಗೆ
ಬೇಡ ಎಂದು ಸಿಎಂಗೆ ಪತ್ರ ಬರೆಯುವ  ಮೂಲಕ ಅಧ್ಯಕ್ಷ ಸ್ಥಾನವನ್ನ ನಿರಾಕರಿಸಿದ್ದಾರೆ. 

ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸುವುದಿಲ್ಲ ಎಂದು ವಿನಮ್ರವಾಗಿ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ.

ನೀವು ನನ್ನ ರಾಜಕೀಯ ಜೀವನದಲ್ಲಿ 1999 ರಿಂದ ಪ್ರೋತ್ಸಾಹ ನೀಡಿದ್ದೀರಿ. ಒಮ್ಮೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಮೂರು ಬಾರಿ ಶಾಸಕರಾಗಿ ಮಾಡಿದ್ದೀರಿ. ಈ ಹಿನ್ನೆಲೆಯಲ್ಲಿ ನನ್ನ ಮೇಲಿನ ಪ್ರೀತಿಯಿಂದಲೇ ಎಂಸಿಎ ಅಧ್ಯಕ್ಷ  ಸ್ಥಾನ ನೀಡಿದ್ದು, ನಿಮಗೆ ನಾನು ಯಾವತ್ತು ಚಿರ ಋಣಿಯಾಗಿದ್ದೇನೆ. ಈವರೆಗೆ ನಾನು ನಿಮ್ಮನ್ನ ಮಂತ್ರಿ ಅಥವಾ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿ ಎಂದು ಯಾವತ್ತು ಕೇಳಿಲ್ಲ. ಆದರೆ ತಾವು ನನಗೆ ನೀಡಿರುವ ಎಂಸಿಎ ಅಧ್ಯಕ್ಷ ಹುದ್ದೆ ಅಲಂಕರಿಸುವುದಿಲ್ಲ. ಅನ್ಯತಾ ಭಾವಿಸಬೇಡಿ ಎಂದು
ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಎಸ್​​ಸಿ ಬಲಗೈ ಸಮುದಾಯದ ಜನಾಂಗವು ಹೆಚ್ಚಿದ್ದು, ಇನ್ನು ಸಾಕಷ್ಟು ಹಿಂದುಳಿದಿದ್ದಾರೆ. ಈ ಸಮುದಾಯದಿಂದ ಮೂವರು ಶಾಸಕರು ಆಯ್ಕೆಯಾಗಿದ್ದು ಮುಂದಿನ ದಿನಗಳಲ್ಲಿ ಯಾರನ್ನಾದರು ಮಂತ್ರಿಗಳನ್ನಾಗಿ ಮಾಡಿ. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್.ಸಿ ಬಲಗೈ ಸಮುದಾಯದವರು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲು
ಪ್ರೋತ್ಸಾಹಿಸುವಂತೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

SCROLL FOR NEXT