ವಿಧಾನಪರಿಷತ್ ಕಲಾಪ 
ರಾಜಕೀಯ

ರಣಾಂಗಣವಾದ ಪರಿಷತ್ ಕಲಾಪ: ಕಾಂಗ್ರೆಸ್-ಬಿಜೆಪಿ ಸದಸ್ಯರ ಜಟಾಪಟಿ, ನೂಕಾಟ; ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ವಿಧಾನ ಪರಿಷತ್ ಇಂದು ಅಕ್ಷರಶಃ ರಣಾಂಗಣವಾಗಿದ್ದು, ಸಭಾಪತಿ ವಿಷಯದಲ್ಲಿ ಕಾಂಗ್ರೆಸ್ – ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧ, ಕೈ ಕೈ ಮಿಲಾಯಿಸುವಿಕೆ, ನೂಕಾಟ, ತಳ್ಳಾಟಕ್ಕೆ ಸಾಕ್ಷಿಯಾಯಿತು.

ಬೆಂಗಳೂರು: ವಿಧಾನ ಪರಿಷತ್ ಇಂದು ಅಕ್ಷರಶಃ ರಣಾಂಗಣವಾಗಿದ್ದು, ಸಭಾಪತಿ ವಿಷಯದಲ್ಲಿ ಕಾಂಗ್ರೆಸ್ – ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧ, ಕೈ ಕೈ ಮಿಲಾಯಿಸುವಿಕೆ, ನೂಕಾಟ, ತಳ್ಳಾಟಕ್ಕೆ ಸಾಕ್ಷಿಯಾಯಿತು.

ಬೆಳಗ್ಗೆ 11.10ರ ಸುಮಾರಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿ ಜೆಡಿಎಸ್ ನ ಧರ್ಮೇಗೌಡ ಕುಳಿತಿದ್ದದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದೊಯ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಬಿಜೆಪಿ ಸದಸ್ಯರು ಮತ್ತೆ ಅವರನ್ನು ಕರೆತಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರನ್ನು ಸಭಾಪತಿ ಪೀಠದಲ್ಲಿ ಕಾಂಗ್ರೆಸ್ ಸದಸ್ಯರು ಕುಳ್ಳಿರಿಸಿ ಅವರ ಸುತ್ತಲೂ ನಿಂತುಕೊಂಡರು.

ಸಭಾಪತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆಯ ಬಗ್ಗೆ ಮೊದಲು ಪ್ರಸ್ತಾಪವಾಗಬೇಕು ಎಂದು ಜೆಡಿಎಸ್- ಬಿಜೆಪಿ ಸದಸ್ಯರು ಒತ್ತಾಯಿಸಿ ಘೋಷಣೆ ಕೂಗಿದರು. ಕಡಿಮೆ ಸಂಖ್ಯೆಯಲ್ಲಿದ್ದ ಮಾರ್ಷಲ್ ಗಳಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪಕ್ಕೆ ಆಗಮಿಸಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ವಿಧಾನ ಪರಿಷತ್ ನಲ್ಲಿ ಗದ್ದಲ, ನೂಕಾಟ; ಸಭಾಪತಿ ಪೀಠ ಏರಿ ಪ್ರತಿಭಟನೆ
ಗಂಟೆ ನಿಲ್ಲುವ ಮೊದಲೇ ಸಭಾಪತಿ ಪೀಠದಲ್ಲಿ ಆಸೀನರಾದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಕೆಳೆಗೆಳೆದು ಹಾಕಿದ ಘಟನೆ ವಿಧಾನ ಪರಿಷತ್ ನಲ್ಲಿ ನಡೆದಿದೆ. ಈ ಮೂಲಕ ಚಂತಕರ ಚಾವಡಿಯಾಗಿದ್ದ ಮೇಲ್ಮನೆಯಲ್ಲಿ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೈಕೈಮಿಲಾಯಿಸುವಿಕೆ, ನೂಕಾಟ ತಳ್ಳಾಟಕ್ಕೆ ಕಾರಣವಾಗಿ ಸಭಾಪತಿ ಪೀಠದ ಮೇಲೆ ಏರಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

ವಿಧಾನ ಪರಿಷತ್ ಕಲಾಪ ಆರಂಭಕ್ಕಾಗಿ ಬೆಲ್ ಆರಂಭಗೊಂಡು ಅದು ನಿಲ್ಲುವ ಮೊದಲೇ ಜೆಡಿಎಸ್ ನ ಧರ್ಮೇಗೌಡರನ್ನು ಬಿಜೆಪಿ ಸದಸ್ಯರು ಸಭಾಪತಿ ಪೀಠದಲ್ಲಿ ಕೂರಿಸಿದರು. ಪರಿಷತ್ ನಿಯಮದ ಪ್ರಕಾರ ಬೆಲ್ ನಿಂತ ನಂತರ ಮಾರ್ಷಲ್ ಬಂದು ಸಭಾಪತಿಗಳ ಆಗಮನದ ಸೂಚನೆ ನೀಡಲಾಗುತ್ತದೆ. ನಂತರ ಸಭಾಪತಿಗಳನ್ನು ಎದ್ದುನಿಂತು ಎಲ್ಲರೂ ಸ್ವಾಗತ ಮಾಡುತ್ತಾರೆ, ಆದರೆ ಇಂದು ಬೆಲ್ ನಿಲ್ಲುವ ಮೊದಲೇ, ಮಾರ್ಷಲ್ ಸೂಚನೆ ನೀಡುವ ಮುನ್ನವೇ ಧರ್ಮೇಗೌಡರನ್ನು ಕೂರಿಸಿ ಕಲಾಪ ಆರಂಭಕ್ಕೆಯತ್ನಿಸಲಾಯಿತು.

ಬಿಜೆಪಿ ಸದಸ್ಯರ ಪ್ರಯತ್ನಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಪ್ರತಿಪಕ್ಷ ದ ಮುಖ್ಯ ಸಚೇತಕ ನಾರಾಯಸ್ವಾಮಿ, ಹರಿಪ್ರಸಾದ್ ನೇತೃತ್ವದಲ್ಲಿ ಸಭಾಪತಿ ಪೀಠದ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಪೀಠದಿಂದ ಹೊರಬರುವಂತೆ ಧರ್ಮೇಗೌಡರನ್ನು ಆಗ್ರಹಿಸಿದರು. ಆದರೆ ಪೀಠದಿಂದ ಹೊರ ಬಾರದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ನ ನಾರಾಯಣಸ್ವಾಮಿ ತಂಡ ಕೆಳಗೆಳೆದು, ಸದನದಿಂದ ಹೊರಗಡೆ ಹೊತ್ತೊಯ್ಯಿತು. ಆ ವೇಳ ಉಪಸಭಾಪತಿಗಳ ರಕ್ಷಣೆಗೆ ಧಾವಿಸಿದ ಬಿಜೆಪಿಯ ಆಯನೂರು ಮುಂಜುನಾಥ್, ಜೆಡಿಎಸ್ ನ ಬಸವರಾಜ ಹೊರಟ್ಟಿ ನೇತೃತ್ವದ ಸದಸ್ಯರು ಉಪ ಸಭಾಪತಿಗಳನ್ನು ರಕ್ಷಣೆ ಮಾಡಿದರು.

ಈ ವೇಳೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನ ಒಳಗೆ ಬಾರದಂತೆ ಬಾಗಿಲು ಮುಚ್ಚಿ ಬಾಗಿಲ ಬಳಿಯೇ ಕಾದು ಕುಳಿತ ಬಿಜೆಪಿ ಸದಸ್ಯರ ವರ್ತನೆಗೆ ಕಿಡಿಕಾರಿದ ಕಾಂಗ್ರೆಸ್ ನ ನಜೀರ್ ಅಹಮದ್ ಬಾಗಿಲಿಗೆ ಗುದ್ದಿ ಆಕ್ರೋಶ ಹೊರಹಾಕಿದರು. ಈ ವೇಳೆ ದೊಡ್ಡ ಮಟ್ಟದ ಗದ್ದಲ ಸದನದಲ್ಲಿ ಸೃಷ್ಟಿಯಾಯಿತು. ಸಭಾಪತಿ ಪ್ರವೇಶಕ್ಕೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಕೆಲ ಕಾಲ ಸದನದ ಒಳಗೆ ಬರಲು ಸಭಾಪತಿಗಳಿಗೆ ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಯಿತು.

ಸಭಾಪತಿ ಪೀಠದ ಮುಂದೆ ಗದ್ದಲ ಮುಂದುವರೆಸಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಹಾಕಲಾಗಿದ್ದ ಗಾಜಿನ ಫಲಕ ಕಿತ್ತು ಹಾಕಿ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಕಲಾಪದ ಕಾರ್ಯಕಲಾಪ ಪಟ್ಟಿ ಹರಿದು ಹಾಕಿ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿ ಬಿಜೆಪಿ ವಿರುದ್ಧ ದಿಕ್ಕಾರ ಕೂಗಿದರು.

ನಂತರ ಉಪಸಭಾಪತಿ ಧರ್ಮೇಗೌಡರನ್ನು ಕೆಳಗೆಳೆದಿದ್ದ ಕಾಂಗ್ರೆಸ್ ಸದಸ್ಯರು ನಂತರ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಪಾಟೀಲ್ ರನ್ನು ಸಭಾಪತಿ ಪೀಠದಲ್ಲಿ ಕೂರಿಸಿದರು. ಪೀಠದ ಮುಂದೆ ಜಮಾವಣೆಗೊಂಡು ಕಲಾಪ ಆರಂಭಕ್ಕೆ ಮನವಿ ಮಾಡಿದರು.

ಅಷ್ಟರಲ್ಲಿ ಮಾರ್ಷಲ್ ಗಳು ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಅವರನ್ನು ಸದನಕ್ಕೆ ಕರೆ ತಂದರು. ಸಭಾಪತಿಗಳ ಪ್ರವೇಶ ಖಂಡಿಸಿ ಬಿಜೆಪಿ ಸದಸ್ಯರು‌ ದಿಕ್ಕಾರ ಕೂಗಿದರು. ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾದ ಕಾರಣ ಅನಿರ್ದಿಷ್ಟಾವದಿಗೆ ಕಲಾಪ ಮುಂದೂಡಿಕೆ ಮಾಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸದನದಿಂದ ಹೊರನಡೆದರು.

ಕಲಾಪ ಅನಿರ್ದಿಷ್ಟಾದಿಗೆ ಮುಂದೂಡಿಕೆಯಾದರೂ ಸದನದಲ್ಲಿ ಗದ್ದಲ ಮುಂದುವರೆಯಿತು. ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿ ಪೀಠದ ಮುಂದೆ ಗದ್ದಲ ಮುಂದುವರೆಯಿತು. ‌ಸದನದ ಹೊರಗೂ ಗದ್ದಲ ನಡೆಯಿತು.

ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ಸದನದಲ್ಲಿ ಕೊರೊನಾ ನಿಯಮಾವಳಿ ಗಾಳಿಗೆ ತೂರಿದ ಸದಸ್ಯರು, ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಗದ್ದಲ ಕೋಲಾಹದಲ್ಲಿ ತೊಡಗಿದ್ದರು. ಬಳಿಕ ಬಿಜೆಪಿ ಸದಸ್ಯರು ಮತ್ತು ಸಚಿವರು ಮುಖ್ಯಮಂತ್ರಿಗೆ ಚರ್ಚಿಸಿ ರಾಜ್ಯಪಾಲರಿಗೆ ದೂರು ನೀಡಲು ತೆರಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT