ರಾಜಕೀಯ

ಗ್ರಾಮ ಪಂಚಾಯಿತಿ ಚುನಾವಣೆ: ಮತದಾರರ ಸೆಳೆಯಲು ಹಣದ ಹೊಳೆ, ಆಸ್ತಿಪಾಸ್ತಿ ಮಾರಿ ಸ್ಪರ್ಧೆ!

Srinivasamurthy VN

ಬೆಳಗಾವಿ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿರುವ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.

ಹೌದು.. ಡಿಸೆಂಬರ್ 22 ರಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಶತಾಯಗತಾಯ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಇದೀಗ ಅಭ್ಯರ್ಥಿಗಳು ಡಿಜಿಟಲ್  ಪ್ರಚಾರದಲ್ಲೂ ತೊಡಗಿದ್ದು, ಅಭ್ಯರ್ಥಿಗಳ ಛಾಯಾಚಿತ್ರ ಮತ್ತು ಹಿನ್ನೆಲೆ ಸಂಗೀತ ಇರುವ 30 ಸೆಕೆಂಡುಗಳ ಕ್ಲಿಪ್‌ಗಳು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ  ಹರಿದಾಡುತ್ತಿದ್ದು, ಟ್ರೆಂಡಿಂಗ್ ಆಗಿದೆ. 

ಗ್ರಾಮೀಣ ಭಾಗದ ಮತದಾರರನ್ನು ಸೆಳೆಯಲು ಮಧ್ಯ ಮತ್ತು ಮಾಂಸಾಹಾರಕ್ಕಾಗಿ ಲಕ್ಷಾಂತರ ರೂಗಳನ್ನು ಖರ್ಚು ಮಾಡಲಾಗುತ್ತಿದೆ. ದಶಕದ ಹಿಂದೆ ಪುಳಿಯೊಗರೆ, ಚಿತ್ರಾನ್ನ ಮತ್ತು ಟೀಗೆ ಸೀಮಿತವಾಗಿದ್ದ ಓಲೆಕೆ ಸೂತ್ರ ಇದೀಗ ಬಿರಿಯಾನಿಯನ್ನೂ ಮೀರಿ ಮಾಂಸದೂಟ, ಹಣ,  ವಿದ್ಯುನ್ಮಾನ ವಸ್ತುಗಳ ಉಡುಗೊರೆಯವರೆಗೂ ಬಂದು ನಿಂತಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಚುನಾವಣಾ ಆಯೋಗ ಯಾವುದೇ ರೀತಿಯ  ಹಣದ ಮಿತಿ ಹೇರದೇ ಇರುವುದು ಅಭ್ಯರ್ಥಿಗಳ ಮಾರ್ಗ ಮತ್ತಷ್ಟು ಸುಗಮವಾಗಿದೆ.

ಚುನಾವಣೆಗಾಗಿ 2 ಎಕರೆ ಭೂಮಿ ಮಾರಿದ ಅಭ್ಯರ್ಥಿ
ಚಿಕೋಡಿ ತಾಲ್ಲೂಕಿನ ತೋರನ್ಹಳ್ಳಿ ಗ್ರಾಮದಲ್ಲಿ ಚುನಾವಣಾ ಕಾವು ಎಷ್ಟರ ಮಟ್ಟಿಗೆ ಏರಿದೆಯೆಂದರೆ, ಇಲ್ಲಿನ ಇಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರು ತಮ್ಮ ಹತ್ತು ಎಕರೆ ಕೃಷಿ ಭೂಮಿಯ ಪೈಕಿ 2 ಎಕರೆ ಭೂಮಿಯನ್ನು ಚುನಾವಣಾ ವೆಚ್ಚಕ್ಕಾಗಿ ಮಾರಾಟ ಮಾಡಿದ್ದಾರೆ. ಸುಮಾರು 20 ಲಕ್ಷ  ರೂಗಳಿಗೆ 2 ಎಕರೆ ಭೂಮಿ ಮಾರಾಟ ಮಾಡಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಅಭ್ಯರ್ಥಿಗೆ ಈ ವೆಚ್ಚ ಕೂಡ ಲೆಕ್ಕಕ್ಕಿಲ್ಲ.  

ಮತದಾರರ ಸೆಳೆಯಲು ಪ್ರವಾಸ ಪ್ಯಾಕೇಜ್ ಗಳು
ಹಣ, ಮದ್ಯ ಮತ್ತು ಮಾಂಸ ಒಂದೆಡೆಯಾದರೆ, ಖಾನಾಪುರ ತಾಲೂಕಿನ ಅವರೋಲಿ ಗ್ರಾಮದಲ್ಲಿ ಅಭ್ಯರ್ಥಿಗಳು ಮತದಾರರ ಸೆಳೆಯಲು ಪ್ರವಾಸ ಪ್ಯಾಕೇಜ್ ಗಳನ್ನು ಚಾಲ್ತಿಗೆ ತಂದಿದ್ದಾರೆ. ಮತದಾರರನ್ನು ಸೆಳೆಯಲು ಇಲ್ಲಿನ ಮೂರು ಅಭ್ಯರ್ಥಿಗಳು ಮತದಾರರಿಗೆ ಮೂರು ದಿನಗಳ  ಪ್ರವಾಸ ಆಯೋಜಿಸುತ್ತಿದ್ದಾರೆ. ಪ್ರಸ್ತುತ ಪ್ರವಾಸಕ್ಕೆ ಹೋಗಿರುವ ಗ್ರಾಮಸ್ಥರು ಡಿಸೆಂಬರ್ 22 ಅಂದರೆ ಮತದಾನ ನಡೆಯುವ ದಿನ ನೇರವಾಗಿ ಗ್ರಾಮಕ್ಕೆ ಆಗಮಿಸಿ ಮತ ಚಲಾಯಿಸುತ್ತಾರೆ.  

3,808 ಸ್ಥಾನಗಳಿಗೆ 11,256 ಅಭ್ಯರ್ಥಿಗಳು 
ಬೆಳಗಾವಿಯ 477 ಗ್ರಾಮ ಪಂಚಾಯಿತಿಗಳ ಪೈಕಿ 4,259  ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಈ ಪೈಕಿ ಈಗಾಗಲೇ 437 ಸ್ಥಾನಗಳಲ್ಲಿ 437 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಬಾಕಿ ಇರುವ 3,808 ಸ್ಥಾನಗಳಿಗೆ 11,256 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 
 

SCROLL FOR NEXT