ರಾಜಕೀಯ

ಬಜೆಟ್ ಅಧಿವೇಶನದ ನಂತರ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಸಿಎಂ ಯಡಿಯೂರಪ್ಪ

Lingaraj Badiger

ಶಿವಮೊಗ್ಗ: ಬಜೆಟ್ ಅಧಿವೇಶನದ ನಂತರ ವಿವಿಧ ಮಂಡಳಿ ಮತ್ತು ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಶಾಸಕರಿಗೆ ತಾವು ನೀಡಿದ್ದ ಭರವಸೆಯನ್ನು ಜೀವಂತವಾಗಿಡುವ ಪ್ರಯತ್ನವಾಗಿ ಯಡಿಯೂರಪ್ಪ ಅವರು ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಬಜೆಟ್ ಅಧಿವೇಶನ ಮಾರ್ಚ್ 5 ರಿಂದ ಆರಂಭವಾಗಲಿದೆ. ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರನ್ನು ಶೀಘ್ರವೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು. ಇತರ ಹಿರಿಯ ಶಾಸಕರಿಗೆ ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನಗಳನ್ನು ನೀಡಲಾಗುವುದು ಎಂದು ಯಡಿಯೂರಪ್ಪ ಭಾನುವಾರ ಸಂಜೆ ತಮ್ಮ ಸ್ವಂತ ಕ್ಷೇತ್ರವಾದ ಶಿಕಾರಿಪುರದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉಮೇಶ್ ಕತ್ತಿ ಅವರು ಜೇಷ್ಠತೆಯ ಆಧಾರದ ಮೇಲೆ ಸಚಿವರಾಗಲು ಅರ್ಹರಾಗಿದ್ದರೂ, ರಾಜಕೀಯ ಅನಿವಾರ್ಯತೆಯಿಂದಾಗಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ತೀರ್ಥಹಳ್ಳಿ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿರುವ ಶಾಸಕ ಅರಗ ಜ್ಞಾನೇಂದ್ರ ಬಗ್ಗೆ ಮಾತನಾಡಿದ ಯಡಿಯೂರಪ್ಪ,  ಜ್ಞಾನೇಂದ್ರ ಅವರಂತಹ ಅನೇಕ ಹಿರಿಯ ಮತ್ತು ಅರ್ಹ ಶಾಸಕರು ಸಚಿವರಾಗಲು ಸಾಧ್ಯವಾಗಿಲ್ಲ. ಹಿರಿಯ ಸಚಿವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ-ಮಾನ ನೀಡಲಾಗುವುದು ಎಂದರು.

ರಾಜ್ಯ ಸಚಿವ ಸಂಪುಟದ ಇತ್ತೀಚಿನ ವಿಸ್ತರಣೆಯು ಹಿರಿಯ ಶಾಸಕರಲ್ಲಿ ಅಸಮಾಧಾನ ಉಂಟುಮಾಡಿದೆ ಎಂಬುದನ್ನು ನಿರಾಕರಿಸಿದ ಅವರು, ಹಿರಿಯ ಶಾಸಕರು ಮತ್ತು ಬಿಜೆಪಿಗೆ ಹೊಸದಾಗಿ ಸೇರ್ಪಡೆಯಾದವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಲ್ಲದೆ, ಹೊಸಬರನ್ನು ಪಕ್ಷಕ್ಕ ಸೇರಿಸಿಕೊಳ್ಳಲು ಕಾರಣವಾಗಿರುವ ರಾಜಕೀಯ ಅನಿವಾರ್ಯತೆಯ ಬಗ್ಗೆ ಹಿರಿಯ ನಾಯಕರಿಗೆ ತಿಳಿದಿದೆ ಎಂದರು.

SCROLL FOR NEXT