ರಾಜಕೀಯ

ಮುಗಿಯದ ಸಂಪುಟ ಗೊಂದಲ: 9 ಸಚಿವರ  ಖಾತೆಗಳನ್ನು ಮರು ಹಂಚಿಕೆ ಮಾಡಿದ ಯಡಿಯೂರಪ್ಪ

Raghavendra Adiga

ಬೆಂಗಳೂರು:  ನೂತನ ಸಚಿವರಿಗೆ ನಿನ್ನೆ ಮುಖ್ಯಮಂತ್ರಿ ಹಂಚಿಕೆ ಮಾಡಿದ್ದ ಖಾತೆಗಳ ವಿಷಯದಲ್ಲಿ ಕೆಲವು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ.

9 ಸಚಿವರಿಗೆ ಖಾತೆಗಳನ್ನು ಮರು ಹಂಚಿಕೆ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಸಚಿವ ಬಿ.ಸಿ. ಪಾಟೀಲ್ ಅವರ ಒತ್ತಡಕ್ಕೆ ಯಡಿಯೂರಪ್ಪ ಮಣಿದಿದ್ದಾರೆ. ಬಿ.ಸಿ.ಪಾಟೀಲ್ ಅವರಿಗೆ ನಿನ್ನೆ ಅರಣ್ಯ ಖಾತೆ  ನೀಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಅದನ್ನು ಬದಲಿಸಿ ಅವರಿಗೆ ಕೃಷಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. 

ಶಿವರಾಮ್ ಹೆಬ್ಬಾರ್ ಕಾರ್ಮಿಕ ಖಾತೆ ಜೊತೆ ಸಕ್ಕರೆ ಖಾತೆ, ಬಸವರಾಜ್ ಬೊಮ್ಮಾಯಿ ಅವರಿಗೆ ಗೃಹ ಖಾತೆ ನೀಡಲಾಗಿದೆ. ಸಿ.ಸಿ. ಪಾಟೀಲ್  ಅವರಿಗೆ ಗಣಿ ಹಾಗೂ ಭೂ ವಿಜ್ಞಾನ ಜೊತೆಗೆ ಕೈಗಾರಿಕೋದ್ಯಮ ಇಲಾಖೆ ನೀಡಲಾಗಿದೆ.

ಪ್ರಭು ಚೌಹಾಣ್ ಅವರಿಗೆ ಪಶು ಸಂಗೋಪನೆ ಖಾತೆ, ಆನಂದ್ ಸಿಂಗ್ ಅವರಿಗೆ ಅರಣ್ಯ ಹಾಗೂ ಜೈವಿಕ ಪರಿಸರ ಖಾತೆ, ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹಂಚಿಕೆ ಮಾಡಲಾಗಿದೆ. ಶ್ರೀಮಂತ ಪಾಟೀಲ್ ಅವರಿಗೆ ಜವಳಿ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ಖಾತೆ ನಿಡಲಾಗಿದೆ. 

 ಮೂರನೇ ಬಾರಿಯ ಖಾತೆ ಹಂಚಿಕೆ ವೇಳೆಯೂ ಬೆಂಗಳೂರು ನಗರಾಭಿವೃದ್ಧಿ ಹಾಗೂ ಇಂಧನ ಖಾತೆಯನ್ನು ಯಾರಿಗೂ ಹಂಚಿಕೆ ಮಾಡಿಲ್ಲ. ಈ ಎರಡು ಖಾತೆಗಳನ್ನು ತನ್ನ ಬಳಿಯಲ್ಲೇ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ.

ಇಂಧನ ಖಾತೆ ಮೇಲೆ ಸುಧಾಕರ ಹಾಗೂ ಆನಂದ್ ಸಿಂಗ್ ಕಣ್ಣಿಟ್ಟಿದ್ದು, ಅದನ್ನು ಪಡೆಯಲು ಪೈಪೋಟಿ ನಡೆಸಿದ್ದರು. ಇಂದು ಬೆಳಗ್ಗೆ ಆನಂದ್ ಸಿಂಗ್ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದರೆ ಯಡಿಯೂರಪ್ಪ ಅವರು ಇಂಧನ ಖಾತೆಯನ್ನು ತಮ್ಮ ಬಳಿಯೆ ಇರಿಸಿಕೊಂಡು, ಅರಣ್ಯ ಹಾಗೂ ಜೈವಿಕ ಪರಿಸರ ಇಲಾಖೆಯನ್ನು ಆನಂದ್ ಸಿಂಗ್ ಅವರಿಗೆ ನೀಡಿದ್ದಾರೆ.

ಸಿ.ಸಿ. ಪಾಟೀಲ್ ಅವರಿಗೆ ಗಣಿ ಹಾಗೂ ಭೂ ವಿಜ್ಞಾನ ಖಾತೆ ಜೊತೆಗೆ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಹಂಚಿಕೆ ಮಾಡಲಾಗಿದೆ.  ಪ್ರಭು ಚೌಹಾಣ್ ಗೆ ಪಶು ಸಂಗೋಪನೆ ಖಾತೆ ಜೊತೆಗೆ ಹಜ್ ಮತ್ತು ವಕ್ಫ್ ಇಲಾಖೆ ಹಂಚಿಕೆ ಮಾಡಲಾಗಿದೆ.

SCROLL FOR NEXT