ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್'ನ ಒಂದು ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪರ ಮತ ಚಲಾಯಿಸಬೇಕೆಂದು ಪಕ್ಷದ ಸಚಿವರಿಗೆ ಹಾಗೂ ಶಾಸಕರಿಗೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಯಿತು.
ಈ ಸಭೆಯು ಕೇವಲ ಅರ್ಧಗಂಟಗಳ ಕಾಲ ಮಾತ್ರ ನಡೆದಿದ್ದು, ಸಭೆಯಲ್ಲಿ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ವಿಪ್ ನಲ್ಲಿ ಸದನದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡಬಾರದು. ಪ್ರತಿಪಕ್ಷಗಳ ಟೀಕಾಸ್ತ್ರಗಳಿಗೆ ಸರಿಯಾದ ಉತ್ತರವನ್ನು ನೀಡಬೇಕು. ಯಾವುದೇ ಸಚಿವರನ್ನೂ ಇಕ್ಕಟ್ಟಿಗೆ ಸಿಲುಕಿಸಲು ಬಿಡಬಾರದು. ಈ ಬಾರಿಯ ಬಜೆಟ್ ಅಧಿವೇಶನ ಕಠಿಣವಾಗಿರಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಶಾಸಕರಿಗೆ ತಿಳಿಸಲಾಯಿತು ಎಂದು ತಿಳಿದುಬಂದಿದೆ.
ಚುನಾವಣೆಗೆ ವಿಧಾನಸಭಾ ಸಚಿವಾಲಯವು ಸಕಲ ಸಿದ್ಧತೆಯನ್ನು ಮಾಡಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತಪತ್ರಗಳು, ಗೌಪ್ಯ ಮತದಾನದ ಸ್ಥಳ ನಿಗದಿ ಸೇರಿದಂತೆ ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ಳಲಾಗಿದೆ. ವಿಧಾನಸೌಧದ 106 ಸಮಿತಿ ಕೊಠಡಿಯಲ್ಲಿ ಮತದಾನ ನಡೆಯಲಿದೆ. ಗೌಪ್ಯ ಮತದಾನ ಇದಾಗಿದ್ದು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ಅಂತಿಮ ಹಂತದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅನಿಲ್ ಕುಮಾರ್ ಅಂತಿಮ ಹಂತದಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ. ಇದು ಉಪಮುಖ್ಯಮಂತ್ರಿ ಸವದಿಯವರಿಗೆ ಗೆಲುವಿಗೆ ಇದ್ದ ಅಡ್ಡಿ ದೂರವಂತಾಗಿದೆ.
ಉಪಚುನಾವಣೆಗ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಈಗಾಗಲೇ ಅಂತಿಮಗೊಂಡು ಅಧಿಸೂಚನಯಾಗಿರುವ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅಖಾಡದಿಂದ ಹಿಂದೆ ಸರಿದರೂ ಚುನಾವಣೆ ನಡೆಯಲಿದೆ ಚುನಾವಣಾ ಕಾರ್ಯಕ್ಕಾಗಿ 25ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಆದರೆ, ಮತದಾನ ಕೊಠಡಿಯಲ್ಲಿ 15 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ.
ಬಿಜೆಪಿ ಶಾಸಕರು ಮಾತ್ರ ಮತ ಚಲಾಯಿಸಲಿದ್ದು, ಅನಿಲ್ ಕುಮಾರ್ ಕಣದಿಂದ ಹಿಂದ ಸರಿದಿರುವ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮತದಾನ ಪ್ರಕ್ರಿಯೆಯಿಂದ ದೂರ ಉಳಿದುಕೊಳ್ಳಲಿದ್ದಾರೆ. ಲಕ್ಷ್ಮಣ್ ಸವದಿ ಗೆಲುವು ಖಚಿತವಾಗಿದ್ದು, ಎಷ್ಟು ಮತಗಲು ಬೀಳಲಿವೆ ಎಂಬುದು ಕುತೂಹಲ ಮೂಡಿಸಿದೆ.
ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಬಳಿಕವಷ್ಟೇ ಮತದಾನದ ವಿವರ ಲಭ್ಯವಾಗಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿದಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಶಾಸಕರು ಮತ ಚಲಾಯಿಸಲಿದ್ದಾರೆ. ಉಪಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಬಾ ಕ್ಷೇತ್ರದಿಂದ ರಿಜ್ವಾನ್ ಹರ್ಷದ್ ಜಯಗಳಿಸಿದ್ದರಿಂದ ವಿಧಾನಸಭಾ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಒಂದು ಸ್ಥಾನ ತರವುಗೊಂಡಿದ್ದು, ಈ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಸಲಾಗುತ್ತಿದೆ.