ರಾಜಕೀಯ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆ ಕೇಳಬೇಡಿ: ಸುದ್ದಿಗಾರರಿಗೆ ಸಿಎಂ ಯಡಿಯೂರಪ್ಪ ತಾಕೀತು 

Sumana Upadhyaya

ಬೆಂಗಳೂರು: ಸಚಿವಾಕಾಂಕ್ಷಿಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುತ್ತಿರುವುದರ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರ ಕೊಡಲು ನಿರಾಕರಿಸಿದ್ದಾರೆ. 


ಸ್ವಿಡ್ಜರ್ಲೆಂಡ್ ನ ದಾವೊಸ್ ನಲ್ಲಿ ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿ ಹಿಂತಿರುಗಿದ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. 


ಈ ಸಂದರ್ಭದಲ್ಲಿ ಸಹಜವಾಗಿ ಪತ್ರಕರ್ತರು ಸಂಪುಟ ವಿಸ್ತರಣೆ ಯಾವಾಗ, ಯಾವ ಶಾಸಕರಿಗೆಲ್ಲಾ ಸಚಿವ ಹುದ್ದೆ ನೀಡುತ್ತೀರಿ ಎಂದು ಕೇಳಿದರು.


ಅದಕ್ಕೆ ಉತ್ತರಿಸಿದ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರೂ ಪ್ರಶ್ನೆ ಕೇಳಬೇಡಿ, ದಾವೊಸ್ ಭೇಟಿ ಬಗ್ಗೆ ಮಾತನಾಡಲು ನಿಮ್ಮನ್ನು ಕರೆದಿದ್ದೇನೆ ಎಂದರು.


ಮೂಲಗಳಿಂದ ತಿಳಿದುಬಂದಿರುವ ಪ್ರಕಾರ, ಸಿಎಂ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ದೆಹಲಿಗೆ ಇನ್ನು ಮೂರ್ನಾಲ್ಕು ದಿನ ಹೋಗುವ ಸಾಧ್ಯತೆಯಿಲ್ಲ. ಇಂದಿನಿಂದ ಅವರು ಮೈಸೂರು, ಹಾಸನ ಮತ್ತು ಮಡಿಕೇರಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿಯೇ ಮೂರ್ನಾಲ್ಕು ದಿನಗಳು ಆಗುತ್ತವೆ.


ಹಿಂದಿನ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ರಾಜೀನಾಮೆ ನೀಡಿ ಮತ್ತೆ ಉಪ ಚುನಾವಣೆ ನಡೆದು ಶಾಸಕರಾಗಿ ಆಯ್ಕೆಗೊಂಡು ಸುಮಾರು 2 ತಿಂಗಳುಗಳು ಆಗಿವೆ. ಹಲವು ಕಾರಣಗಳಿಂದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. 
ಈ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಸೋಮವಾರದ ನಂತರ ಶನಿವಾರದೊಳಗೆ ಆಗಬಹುದು ಎಂದು ಅಂದುಕೊಂಡಿದ್ದೇವೆ ಎಂದು ಸರ್ಕಾರದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ನಿನ್ನೆ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಯಡಿಯೂರಪ್ಪ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು.

SCROLL FOR NEXT