ರಾಜಕೀಯ

ಒಳ ಒಪ್ಪಂದ ರಾಜಕಾರಣ ಬಹಳ ಕಾಲ ನಡೆಯಲ್ಲ: ಕುಮಾರಸ್ವಾಮಿ

Lingaraj Badiger

ರಾಮನಗರ: ಒಳ ಒಪ್ಪಂದದ, ಕುತಂತ್ರದ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸೂಚ್ಯವಾಗಿ ಹೇಳಿದ್ದಾರೆ.

ವಿಪಕ್ಷ ನಾಯಕ  ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬದಾಮಿ ಮತಕ್ಷೇತ್ರಕ್ಕೆ ಆಡಳಿತಾರೂಢ ಬಿಜೆಪಿ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡಿದ ವಿಚಾರವಾಗಿ ಇಲ್ಲಿನ ಚನ್ನಪಟ್ಟಣ ಸುದ್ದಿಗಾರರ  ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಇದು ಈಗಿನ ಬಿಜೆಪಿ ನೀಡಿರುವ ಅನುದಾನವಲ್ಲ. ಮೈತ್ರಿ ಸರ್ಕಾರದಲ್ಲಿ ಬದಾಮಿ ಕ್ಷೇತ್ರಕ್ಕೆ 1200 ಕೋಟಿಗೂ ಹೆಚ್ಚು ಅನುದಾನ  ಹಾಗೂ ಕಾಂಗ್ರೆಸ್ ಶಾಸಕರ  ಕ್ಷೇತ್ರಗಳಿಗೆ 19 ಸಾವಿರ ಕೋಟಿ ಹಣ ನೀಡಲಾಗಿತ್ತು. ಸ್ಥಗಿತಗೊಂಡಿದ್ದ ಅನುದಾನವನ್ನು ಈ ಸರ್ಕಾರದಲ್ಲಿ ಕ್ಲಿಯರ್ ಮಾಡಿದ್ದಾರೆ ಅಷ್ಟೇ. ಈಗ ಕೆಲವು ಕ್ಷೇತ್ರದಲ್ಲಿ ಕಾಂಗ್ರೆಸ್ - ಜೆಡಿಎಸ್ ಕ್ಷೇತ್ರಗಳ ಅನುದಾನವನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದರು.

ರಾಜಕಾರಣದಲ್ಲಿ ಒಳ ಒಪ್ಪಂದಿಂದ ಬದುಕುತ್ತೇವೆ ಎಂದರೆ ಅದು ಹೆಚ್ಚು ದಿನ ಉಳಿಯುವುದಿಲ್ಲ, ರಾಜಕಾರಣ ನೇರವಾಗಿರಬೇಕು ಅಷ್ಟೇ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಕುಟುಕಿದರು.

ಕುಮಾರಸ್ವಾಮಿ ಹೇಳಿಕೆಗಳನ್ನು ಟ್ರೋಲ್ ಮಾಡಿ ವ್ಯಂಗ್ಯ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ  ಜೆಡಿಎಸ್ ಕಾರ್ಯಕರ್ತರ ಆಕ್ರೋಶ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಶಾಂತಿಯ ವಾತವರಣ ಹಾಳು ಮಾಡಬೇಡಿ, ಸರಿಪಡಿಸಿಕೊಳ್ಳಿ ಎಂದಿದ್ದೇನೆ. ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕೀಳುಮಟ್ಟದ ಪ್ರಚಾರ ಮಾಡಲಾಗುತ್ತಿದೆ. ಇಂತಹ ವಿಚಾರಗಳನ್ನು ತಾವು ಸಮಾಧಾನವಾಗಿಯೇ ಸ್ವೀಕರಿಸಿದ್ದು, ತಮ್ಮಷ್ಟು ತಾಳ್ಮೆಯಿಂದ ಇರುವವರು ರಾಜಕಾರಣದಲ್ಲಿ ಯಾರು ಇಲ್ಲ ಎನ್ನುವುದು ತಮ್ಮ ಅಭಿಪ್ರಾಯ ಎಂದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಆ ಪ್ರತಾಪ್ ಸಿಂಹನಿಗೆ ಏನಾದರೂ ತಿಳುವಳಿಕೆ ಇರುವುದೇ ಆದರೆ ಕೊಡಗು ನೆರೆ ಸಂತ್ರಸ್ತರಿಗೆ ತಾವು ಕೊಟ್ಟ ಪರಿಹಾರ ಎಷ್ಟು? ಎಷ್ಟು ಹಣ ಮಂಜೂರಾಗಿದೆ ಎಂಬುದನ್ನು ತಿಳಿದುಕೊಳ್ಳಲಿ. ಹೇಗೆ ಯಾವ ರೀತಿ ಕೆಲಸ ಮಾಡಬೇಕು ಎನ್ನುವುದು ಆ ಪ್ರತಾಪ್ ಸಿಂಹನಿಂದ ಹೇಳಿಸಿಕೊಳ್ಳಬೇಕಾಗಿಲ್ಲ. ಕೇವಲ ಬರವಣಿಗೆ ಮುಖ್ಯ ಅಲ್ಲ, ಜನರಿಗೆ ಯಾವ ರೀತಿ ಸ್ಪಂದಿಸಬೇಕೆಂದು ತಿಳಿದಿರಬೇಕು. ತಾವು ಕೇವಲ ಬರವಣಿಗೆಯಲ್ಲಿ, ಟ್ವೀಟ್ ನಲ್ಲಿ ಕೆಟ್ಟ ಭಾವನೆಗಳನ್ನು ವ್ಯಕ್ತಪಡಿಸುವ ರಾಜಕಾರಣಿಯಲ್ಲ. ಪ್ರತಾಪ್ ಸಿಂಹಗೆ ನಿಜವಾಗಿಯೂ ಸಂಸದನ ಯೋಗ್ಯತೆ ಇರುವುದೇ ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ಮೋದಿ ಬಳಿ ಹೋಗಿ ರಾಜ್ಯದಲ್ಲಿರುವ ಜನರ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಸವಾಲೆಸೆದರು.

SCROLL FOR NEXT