ರಾಜಕೀಯ

ಹಾಸನದಲ್ಲಿ ಸ್ಯಾನಿಟೈಸರ್ ರಾಜಕಾರಣ: ಬಿಜೆಪಿ, ಜೆಡಿಎಸ್‌ನಿಂದ ಪೈಪೋಟಿ

Manjula VN

ಹಾಸನ: ಕೊರೊನಾ ಸೋಂಕು ಹರಡದಂತೆ ಸ್ಯಾನಿಟೈಸರ್ ಅನ್ನು ಮುಂಜಾಗ್ರತೆಗಾಗಿ ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾದಿಂದಾಗಿ ಸ್ಯಾನಿಟೈಸರ್ ಜನರ ಪ್ರತಿದಿನ ಬದುಕಿನ ಭಾಗವಾಗಿದೆ. ಜನರಿಗೆ ಹತ್ತಿರವಾಗಿರುವ ಸ್ಯಾನಿಟೈಸರ್ ಇದೀಗ ರಾಜಕಾರಣಕ್ಕೂ ಕಾರಣವಾಗಿದೆ.

ಹೌದು, ಹಾಸನದಲ್ಲೀಗ ಸ್ಯಾನಿಟೈಸರ್ ರಾಜಕಾರಣವೇ ಶುರುವಾಗಿ ಬಿಟ್ಟಿದೆ. ಉಚಿತ ಸ್ಯಾನಿಟೈಸರ್ ನೀಡುವ ನೆಪದಲ್ಲಿ ಜಿಲ್ಲೆಯಲ್ಲಿ ರಾಜಕಾರಣಿಗಳ ನಡುವೆ ಜಿದ್ದಾಜಿದ್ದಿ ಪ್ರಾರಂಭವಾಗಿದೆ. ಬಿಜೆಪಿ ಶಾಸಕ ಪ್ರೀತಮ್ ಜೆ. ಗೌಡ ತಮ್ಮ ಭಾವಚಿತ್ರದೊಂದಿಗೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಮುಂದೆ 250 ಕಡೆಗಳಲ್ಲಿ ಉಚಿತ ಸ್ಯಾನಿಟೈಸರ್ ಜೊತೆಗೆ ಸ್ಯಾನಿಟೈಜರ್ ಸ್ಟ್ಯಾಂಡ್ ಅನ್ನು ಅಳವಡಿಸಿದ್ದರು. ಎಲ್ಲೆಲ್ಲೂ ಪ್ರೀತಮ್ ಗೌಡ ಭಾವಚಿತ್ರದೊಂದಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಕಂಡ ಜಿಲ್ಲೆಯ ಜೆಡಿಎಸ್ ನಾಯಕರು ಸಹ ತಾವೇನು ಕಡಿಮೆಯಿಲ್ಲ ಎನ್ನುವಂತೆ ಸ್ಯಾನಿಟೈಸರ್ ಸ್ಟ್ಯಾಂಡ್ ಅಳವಡಿಕೆಗೆ ಮುಂದಾಗಿದ್ದಾರೆ.

ಜೆಡಿಎಸ್ ಮುಖಂಡ ಎಸ್. ದೇವೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತ ದಯಾನಂದ್ ಎಂಬುವರು ಶಾಸಕ ಪ್ರೀತಮ್ ಗೌಡ ಅವರಂತೆ ಕೈಮುಗಿಯುತ್ತಿರುವ ಭಾವಚಿತ್ರಗಳೊಂದಿಗೆ ಉಚಿತ ಸ್ಯಾನಿಟೈಸರ್ ಸ್ಟ್ಯಾಂಡನ್ನು ಇರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ, ಸರ್ಕಾರಿ ಕಚೇರಿಗಳಲ್ಲಿ ಪ್ರೀತಮ್ ಗೌಡರ ಭಾವಚಿತ್ರವಿರುವ ಸ್ಯಾನಿಟೈಸರ್ ಸ್ಟ್ಯಾಂಡ್‌ನ ಪಕ್ಕದಲ್ಲೇ ಜೆಡಿಎಸ್‌ನವರೂ ಹಸಿರು ಬಣ್ಣದ ಉಚಿತ ಸ್ಯಾನಿಟೈಸರ್ ಸ್ಟ್ಯಾಂಡ್ ಅನ್ನು ಅಳವಡಿಸಿದ್ದಾರೆ.

ಒಟ್ಟಿನಲ್ಲಿ ಉಭಯ ರಾಜಕೀಯ ಪಕ್ಷಗಳ ಪೈಪೋಟಿಯಲ್ಲಿ ನಗರದಲ್ಲಿ ಸ್ಯಾನಿಟೈಸರ್ ಸ್ಟ್ಯಾಂಡ್‌ಗಳ ಸಂಖ್ಯೆ ಮಾತ್ರ ಹೆಚ್ಚಾಗಿರುವುದು ಸತ್ಯ.

SCROLL FOR NEXT