ಸುರೇಶ್ ಕುಮಾರ್ ಮತ್ತು ದೇವನೂರು ಮಹಾದೇವ 
ರಾಜಕೀಯ

ಕೊಳೆತ ಹಣ್ಣುಗಳ ಜತೆ ಒಳ್ಳೆಯ ಹಣ್ಣು ಸೇರಿಕೊಂಡರೆ ಅವೂ ಕೆಡಬಹುದೆ?: ಸುರೇಶ್ ಕುಮಾರ್ ಗೆ ದೇವನೂರು ಮಹಾದೇವ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್. ಸುರೇಶ್ ಕುಮಾರ್ "ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ '' ಎಂಬ ಹೇಳಿಕೆ ನೋಡಿ ನನಗೆ ಶಾಕ್ ಆಯಿತು.

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್. ಸುರೇಶ್ ಕುಮಾರ್ "ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ '' ಎಂಬ ಹೇಳಿಕೆ ನೋಡಿ ನನಗೆ ಶಾಕ್ ಆಯಿತು. " ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ?" ಎಂದು ಹಿರಿಯ ಸಾಹಿತಿ ದೇವನೂರು ಮಹದೇವ್  ವ್ಯಂಗ್ಯವಾಡಿದ್ದಾರೆ. 

ಈ ಕುರಿತು ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ದೇವನೂರು ಮಹದೇವ್, ನಿಮ್ಮಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. 
ಪತ್ರದ ಪೂರ್ಣಪಾಠ

ಮಾನ್ಯ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ ವಂದನೆಗಳು,

ನಿಮ್ಮ ಇ-ಮೇಲ್ ಐಡಿ  nimmasuresh (ನಿಮ್ಮ ಸುರೇಶ್) ಎಂದಿದೆ. ನೀವು ನಮ್ಮ ಸುರೇಶ್ ಅಂದುಕೊಂಡಿದ್ದರಿಂದಲೇ ತಮಗೆ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಹೇಳಿಕೆ, "ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ''-ನೋಡಿ ನನಗೆ ಶಾಕ್ ಆಯಿತು.

ಶ್ರೀ ಎಚ್.ಎಸ್.ದೊರೆಸ್ವಾಮಿಯವರು ಕಳೆದ ಚುನಾವಣೆಯ ಹಿಂದಿನ ದಿನ ಯಾರಿಗೆ ಮತನೀಡಬೇಕೆಂದು ಕರೆ ನೀಡುತ್ತಾ, ಮೋದಿಯವರ ವೈಫಲ್ಯಗಳನ್ನು ಹಾಗೂ ಸರ್ವಾಧಿಕಾರಿ ಪ್ರವೃತ್ತಿಯನ್ನು ವಿವರಿಸುತ್ತಾ, "ಆತ ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ. ಯಾವ ಕೆಲಸ ಮಾಡಿಲ್ಲ. ಕರ್ನಾಟಕವನ್ನು ತೆಗೆದುಕೊಂಡು ಬಿಟ್ರೆ ಇಡೀ ದೇಶವನ್ನು ತಗೋಬಹುದು ಎನ್ನುವ ಆಲೋಚನೆ ಇದೆ. ಆದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು'' ಎಂದು ಹೇಳುತ್ತಾರೆ. ಇದರ ಅರ್ಥ ಸಾಯಿಸಬೇಕು ಎಂದಾಗುವುದೇ? ಅವರ ಮಾತುಗಳಲ್ಲಿ ಎತ್ತಿದ ಸಮಸ್ಯೆಗಳತ್ತ ಕಣ್ಣೆತ್ತೂ ನೋಡುವ ಧೈರ್ಯವಿಲ್ಲದೆ, ಅದನ್ನು ಅಪಾರ್ಥ ಮಾಡಿ, ನೂರು ವರ್ಷಕ್ಕೂ ಮಿಗಿಲಾಗಿ ಅಹಿಂಸೆಯ ವ್ರತ ಪಾಲಿಸಿಕೊಂಡು, ಯಾವುದೋ ಯುಗದ ಮನುಷ್ಯನೊಬ್ಬ ನಮ್ಮ ನಡುವೆ ಬದುಕಿರುವ ಸೋಜಿಗ ಕಾಣದೆ ಸದೆಬಡಿಯುವುದಾದರೆ ನಾವು ಲಿಲ್ಲಿ ಪುಟ್ಟರಂತಾಗಿಬಿಡುತ್ತೇವೆ.

ಸ್ಪಷ್ಟತೆಗಾಗಿ ಒಂದು ಉದಾಹರಣೆ ನೋಡೋಣ: ಇಂದಿನ ಓಲೈಕೆ, ಅವಕಾಶವಾದಿ ರಾಜಕಾರಣದಲ್ಲಿ ಇದೇ ಶ್ರೀ ಬಸವನಗೌಡ ಯತ್ನಾಳ್, ಶ್ರೀ ಈಶ್ವರಪ್ಪ ಅಥವಾ ಮತ್ತಾರೋ ಮೋದಿಯವರ ವಿರೋಧಿಗಳಾಗಿದ್ದರೆ ಅವರು ತಮ್ಮ ಸ್ವಭಾವಕ್ಕೆ ತಕ್ಕಂತೆ ಏನು ಹೇಳುತ್ತಿದ್ದರು? ಮೋದಿಯವರ ತಲೆಗೆ ಹತ್ತಿಪ್ಪತ್ತು ಕೋಟಿ ಫತ್ವಾ ಹೊರಡಿಸುತ್ತಿದ್ದರೇನೋ! ಇಂಥವರು ದೊರೆಸ್ವಾಮಿ ಅವರನ್ನು "ನಕಲಿ ಸ್ವಾತಂತ್ರ್ಯ ಹೋರಾಟಗಾರ'' ಎನ್ನುತ್ತಾರೆ ! ಅಂದರೆ, ರಾಜಕಾರಣವೆಂಬುದು  ಅದೇನು ಜಾದೂ, ಕಣ್ಕಟ್ಟು ವಿದ್ಯೆಯೇ? ಅಸಲಿಯನ್ನು ನಕಲಿ ಮಾಡುವುದಕ್ಕೆ, ನಕಲಿಯನ್ನು ಅಸಲಿ ಮಾಡುವುದಕ್ಕೆ? ದೊರೆಸ್ವಾಮಿ ಅವರನ್ನು "ಪಾಕ್ ಏಜೆಂಟ್ ''ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು? ಇಂದಿನ ನಮ್ಮ ಬಹುತೇಕ ರಾಜಕಾರಣಿಗಳಲ್ಲಿ ಕೆಲವರಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಕಾರು ನಾಲಿಗೆಗಳು. ಇಲ್ಲಿದ್ದಾಗ ಮಾತನಾಡಲು ಒಂದು, ಇನ್ನೊಂದು ಕಡೆ ಹೋದಾಗ ಮತ್ತೊಂದು, ನುಂಗಲು ಮಗದೊಂದು-ಹೀಗೆ.

ಇಂದು ಜನಪ್ರತಿನಿಧಿಗಳು ತಮ್ಮನ್ನು ಜನಪ್ರತಿನಿಧಿಗಳು ಅಂದುಕೊಂಡಿಲ್ಲ. ಶಾಸಕರು ಶಾಸಕ ಅಂದುಕೊಂಡಿಲ್ಲ. ಯಾರೂ ತಮ್ಮ ಸ್ಥಾನಕ್ಕೆ ಹೊಣೆಗಾರರಾಗಿಲ್ಲ. ಇದು ಇಂದಿನ ಸಮಸ್ಯೆಯಾಗಿದೆ. ಉದಾಹರಣೆಗೆ, ಶ್ರೀ ಯತ್ನಾಳ್ ಅವರ ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಾ ಅದು 'ಗುಳೆ ಜಿಲ್ಲೆ' ಎನ್ನಿಸಿಕೊಂಡುಬಿಟ್ಟಿದೆ. ಯತ್ನಾಳರನ್ನು ಆಯ್ಕೆ ಮಾಡಿದ 'ಮತದಾರ ಪ್ರಭುಗಳು' ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಅರಸುತ್ತಾ ಗೋವಾ, ಮಹಾರಾಷ್ಟ್ರದ ಕಡೆಗೆ ಗುಳೆ ಹೋಗುವುದು ದಿನೇದಿನೇ ಹೆಚ್ಚುತ್ತಿದೆ. 

ಅದೇ ವಿಜಯಪುರದಲ್ಲಿ ಒಂದು ದೊಡ್ಡದಾದ ಕೈಗಾರಿಕಾ ಪ್ರದೇಶವಿದೆ. ಆದರೆ, ಆ ಕೈಗಾರಿಕಾ ಪ್ರದೇಶವು ವಿದ್ಯುತ್ ಮತ್ತಿತರ ಮೂಲಸೌಲಭ್ಯಗಳಿಲ್ಲದೆ ನೊಣ ಹೊಡೆಯುತ್ತಿದೆ. ಇಂತಹ ಕಡೆ ಶಾಸಕನಾದವನು ಮಾತಾಡಲೂ ಪುರುಸೊತ್ತಿಲ್ಲದವನಂತೆ ಆ ಕೈಗಾರಿಕಾ ಕ್ಷೇತ್ರಕ್ಕೆ ವಿದ್ಯುತ್ ಮತ್ತಿತರ ಸೌಲಭ್ಯ ಕಲ್ಪಿಸಲು ಕಾರ್ಯಪ್ರವೃತ್ತನಾಗಿರಬೇಕಿತ್ತು. ಆದರೇನಾಗಿದೆ? ಜನಪ್ರತಿನಿಧಿಗಳು ಹೊಣೆಗೇಡಿಯಾಗಿದ್ದಾರೆ. ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಿರುವ ಜನರು ಅವಜ್ಞೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಪಕ್ಷದಲ್ಲೇ ಇರಲಿ ತಮ್ಮಂಥವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ.
ತುಂಬಾ ಹೆಚ್ಚಾಗಿ ಬರೆದುಬಿಟ್ಟೆ. ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ? ನಿಮ್ಮ ಹೇಳಿಕೆ ನೋಡಿದಾಗ ಈ ಪ್ರಶ್ನೆ ನನ್ನೊಳಗೆ ಸುಳಿದಾಡಿತು. ಅದಕ್ಕಾಗಿ ಈ ಪತ್ರ. ಕ್ಷಮೆ ಇರಲಿ.

ನಿಮ್ಮ ವಿಶ್ವಾಸಿ
ದೇವನೂರ ಮಹಾದೇವ
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT